ಐಪಿಎಲ್ ಬೆಟ್ಟಿಂಗ್ ಆಟಗಾರನ ಬಳಿ ಮಾಹಿತಿ ಕೇಳಿದ್ದ ನರ್ಸ್!
ಬೆಟ್ಟಿಂಗ್ ನಡೆಸಲು ಭಾರತದ ಆಟಗಾರನೊಬ್ಬನನ್ನು ಡೆಲ್ಲಿ ಮೂಲದ ನರ್ಸ್‌ವೊಬ್ಬರು ಒಳಗಿನ ಮಾಹಿತಿ ಕೇಳಿದ್ದರು ಎನ್ನುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜ.06): ಐಪಿಎಲ್ ವೇಳೆ ಭಾರತೀಯ ಆಟಗಾರನ ಬಳಿ ಆನ್‌ಲೈನ್‌ನಲ್ಲಿ ತಂಡದ ಮಾಹಿತಿಯನ್ನು ದೆಹಲಿಯ ನರ್ಸ್‌ವೊಬ್ಬಳು ಕೇಳಿದ್ದಳು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ತಾನು ಡಾಕ್ಟರ್ ಎಂದು ಸುಳ್ಳು ಹೇಳಿ, ಆಟಗಾರನೊಂದಿಗೆ 3 ವರ್ಷಗಳಿಂದ ಆನ್‌ಲೈನ್‌ನಲ್ಲಿ ಸ್ನೇಹ ಹೊಂದಿದ್ದ ನರ್ಸ್ ಬೆಟ್ಟಿಂಗ್ ನಡೆಸುವ ಸಲುವಾಗಿ ಮಾಹಿತಿ ಕೇಳಿದ್ದಳು. ಆಟಗಾರ ಈ ವಿಚಾರವನ್ನು ತಕ್ಷಣ ತಂಡದ ಆಡಳಿತದ ಗಮನಕ್ಕೆ ತಂದಿದ್ದರಿಂದ, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಿತ್ತು ಎಂದು ತಿಳಿದು ಬಂದಿದೆ.
ತನ್ನನ್ನು ಸಂಪರ್ಕಿಸಿದ್ದ ನರ್ಸ್ ಎಲ್ಲಿಯವರು ಹಾಗೂ ಎಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ಆಟಗಾರನಿಗೆ ಗೊತ್ತಿರಲಿಲ್ಲವಂತೆ. ಆನ್‌ಲೈನ್ ಚಾಟಿಂಗ್ ವೇಳೆ ತಾವು ಬೆಟ್ಟಿಂಗ್ ಆಡಬೇಕು ಎನ್ನುವ ಉದ್ದೇಶದಿಂದ ಪಂದ್ಯದ ಬಗ್ಗೆ ಹಾಗೂ ಆಡುವ ಹನ್ನೊಂದರ ಬಳಗದ ಬಗ್ಗೆ ಮಾಹಿತಿ ಕೇಳಿದ್ದರು ಎನ್ನಲಾಗಿದೆ.
RCB ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ ಡೇಲ್ ಸ್ಟೇನ್..!
ತನಿಖೆ ವೇಳೆ ಆಟಗಾರ ಹಾಗೂ ನರ್ಸ್ ಇಬ್ಬರನ್ನೂ ವಿಚಾರಣೆ ನಡೆಸಲಾಯಿತು. ಯಾವುದೇ ಬುಕಿಗಳ ಕೈವಾಡ ಇಲ್ಲ ಎಂದು ದೃಢಪಡಿಸಿಕೊಂಡ ಬಳಿಕ ಪ್ರಕರಣವನ್ನು ಅಂತ್ಯಗೊಳಿಸಲಾಯಿತು ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಅಜಿತ್ ಸಿಂಗ್ ತಿಳಿಸಿದ್ದಾರೆ.