ದುಬೈ(ಮೇ.02): ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 2016ರಿಂದ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಅಗ್ರಸ್ಥಾನದಿಂದ ಕೆಳಗಿಳಿದಿದೆ.  ಶುಕ್ರವಾರ ನೂತನವಾಗಿ ಬಿಡುಗಡೆಯಾದ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಭಾರತ 3ನೇ ಸ್ಥಾನಕ್ಕಿಳಿದಿದ್ದು, ಆಸ್ಪ್ರೇಲಿಯಾ ಅಗ್ರಸ್ಥಾನಕ್ಕೇರಿದೆ. 

ಟೆಸ್ಟ್‌ ಕ್ರಿಕೆಟ್‌ನಲ್ಲಿ 2016ರಿಂದ ಭಾರತ (114) ನಂ.1 ಸ್ಥಾನದಲ್ಲಿತ್ತು. 42 ತಿಂಗಳುಗಳ ಬಳಿಕ ಟೀಂ ಇಂಡಿಯಾ ಈ ಸ್ಥಾನವನ್ನು ಕಳೆದುಕೊಂಡಿದೆ. ಅಕ್ಟೋಬರ್ 2016ರಿಂದಲೂ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿತ್ತು. 2016-17ರಲ್ಲಿ ಅತ್ಯುನ್ನತ ಫಾರ್ಮ್‌ನಲ್ಲಿದ್ದ ವಿರಾಟ್ ಪಡೆ 12 ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲಿನ ರುಚಿಯುಂಡಿತ್ತು. ಆ ಬಳಿಕವೂ ಟೀಂ ಇಂಡಿಯಾ ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಜಗತ್ತನ್ನು ಆಳಿತ್ತು. 2019 ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯವಾದ ಬಳಿಕ ಆರಂಭವಾದ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿತ್ತು. ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲೂ ಭಾರತ  ಕ್ಲೀನ್ ಸ್ವೀಪ್ ಮಾಡಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿತ್ತು. ಆದರೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ 2-0 ಅಂತರದಲ್ಲಿ ಮುಗ್ಗರಿಸಿತ್ತು. ಇದು ಅಗ್ರಸ್ಥಾನ ಕೈತಪ್ಪಲು ಪ್ರಮುಖ ಕಾರಣ ಎನಿಸಿತು.

ಈ ವರ್ಷವೇ ಟಿ20 ವಿಶ್ವಕಪ್ ನಡೆಯುತ್ತಾ..? ಕೊನೆಗೂ ತುಟಿ ಬಿಚ್ಚಿದ ಐಸಿಸಿ

ಭಾರತಕ್ಕಿಂತ 2 ಅಂಕಗಳ ಮುನ್ನಡೆ ಸಾಧಿಸಿರುವ ಆಸ್ಪ್ರೇಲಿಯಾ (116) ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ (115) ಇದೆ. ಇನ್ನು ಅತಿಹೆಚ್ಚು ಕಾಲ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲೇ ಉಳಿದುಕೊಂಡಿದೆ. ಆಸ್ಟ್ರೇಲಿಯಾ 20001ರಿಂದ 2009ರ ಅವಧಿಯಲ್ಲಿ 95  ತಿಂಗಳುಗಳ ಕಾಲ ಅಗ್ರಸ್ಥಾನ ಉಳಿಸಿಕೊಂಡಿತ್ತು. ಇನ್ನು ವೆಸ್ಟ್ ಇಂಡೀಸ್ 1981-89ರ ಅವಧಿಯಲ್ಲಿ 89 ತಿಂಗಳುಗಳ ಕಾಲ ನಂ.1 ಸ್ಥಾನದಲ್ಲಿ ಭದ್ರವಾಗಿತ್ತು.

ತಂಡಗಳ ವಿಭಾಗದಲ್ಲಿ ಮಾತ್ರವಲ್ಲದೆ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಹಾಗೂ ಬೌಲರ್‌ಗಳ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ ಅಗ್ರಸ್ಥಾನ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್‌, ಟಿ20 ಹಾಗೂ ಏಕದಿನ 3 ಮಾದರಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ.