T20 World Cup ಟೀಂ ಇಂಡಿಯಾದಿಂದ ಹೊರಗಿಡಲು ಸರಿಯಾದ ಸಮಯ: ಮತ್ತೆ ಫೇಲಾದ ರಾಹುಲ್ ಮೇಲೆ ನೆಟ್ಟಿಗರು ಸಿಡಿಮಿಡಿ..!
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಂದುವರೆದ ಕೆ ಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯ
ಸತತ ಮೂರನೇ ಪಂದ್ಯದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಆರಂಭಿಕ ಬ್ಯಾಟರ್
ರಾಹುಲ್ ಅವರನ್ನು ತಂಡದಿಂದ ಹೊರಗಿಡಲು ಸರಿಯಾದ ಸಮಯವೆಂದ ನೆಟ್ಟಿಗರು
ಪರ್ತ್(ಅ.31): ಅಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೊದಲ ಸೋಲು ಅನುಭವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ದ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಸೋಲು ಅನುಭವಿಸಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದೇ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಕೆ ಎಲ್ ರಾಹುಲ್ ವಿರುದ್ದ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಅವರನ್ನು ತಂಡದಿಂದ ಹೊರಗಿಡಲು ಇದು ಸರಿಯಾದ ಸಮಯ ಎಂದು ಕಿಡಿಕಾರಿದ್ದಾರೆ.
ಭಾನುವಾರ ಇಲ್ಲಿನ ಪರ್ತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕೆ ಎಲ್ ರಾಹುಲ್, ದಕ್ಷಿಣ ಆಫ್ರಿಕಾ ಎದುರು ಫಾರ್ಮ್‌ಗೆ ಮರಳಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಕೆ ಎಲ್ ರಾಹುಲ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಆ ನಿರೀಕ್ಷೆ ಕೂಡಾ ಹುಸಿಗೊಳಿಸಿದ್ದಾರೆ. ಪಾಕಿಸ್ತಾನ ವಿರುದ್ದ 4, ನೆದರ್‌ಲೆಂಡ್ಸ್ ವಿರುದ್ದ 9 ರನ್ ಗಳಿಸಿದ್ದ ರಾಹುಲ್, ಇದೀಗ ದಕ್ಷಿಣ ಆಫ್ರಿಕಾ ಎದುರು ಕೂಡಾ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ವೇಗಿಗಳು ಮೊದಲ ಓವರ್‌ನ ಮೊದಲ ಎಸೆತದಿಂದಲೇ ಆಕ್ರಮಣಕಾರಿ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಹೀಗಾಗಿ ರಾಹುಲ್ ಎದುರಿಸಿದ ಮೊದಲ ಓವರ್‌ನಲ್ಲಿ ಒಂದೇ ಒಂದು ರನ್ ಕಲೆಹಾಕಲು ಯಶಸ್ವಿಯಾಗಲಿಲ್ಲ. ಇನಿಂಗ್ಸ್‌ನ 5ನೇ ಓವರ್‌ನಲ್ಲಿ ಭಾರತ ತನ್ನು ಇಬ್ಬರು ಆಟಗಾರರನ್ನು ಕಳೆದುಕೊಂಡು ಆಘಾತಕ್ಕೊಳಗಾಯಿತು. ಕೆ ಎಲ್ ರಾಹುಲ್ ಮೊದಲ ಮೂರು ಪಂದ್ಯಗಳಿಂದ ಕೇವಲ 22 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಕೆ ಎಲ್ ರಾಹುಲ್ ನೀರಸ ಪ್ರದರ್ಶನ ಟೀಂ ಇಂಡಿಯಾ ಆಯ್ಕೆ ಸಮಿತಿ ತಲೆನೋವು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
Virat Kohli ಖಾಸಗಿತನಕ್ಕೆ ಧಕ್ಕೆ; ಹೋಟೆಲ್ ರೂಂ ವಿಡಿಯೋ, ಅಸಮಾಧಾನ ಹೊರಹಾಕಿದ ಮಾಜಿ ನಾಯಕ..!
ಇನ್ನು ನೆಟ್ಟಿಗರು ಕೂಡಾ ಕೆ ಎಲ್ ರಾಹುಲ್ ಅವರನ್ನು ಬೆಂಚು ಕಾಯಿಸುವಂತೆ ಮಾಡಲು ಸರಿಯಾದ ಸಮಯ ಬಂದಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಓರ್ವ ನೆಟ್ಟಿಗ, ಕೆ ಎಲ್ ರಾಹುಲ್ ಅವರನ್ನು ತಂಡದಿಂದ ಹೊರಗಿಟ್ಟು ಮತ್ತೋರ್ವ ಅರ್ಹ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ.