ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಮಹಿಳೆಯರ ತಂಡ ಸರಣಿ ಕೈವಶ ಮಾಡಿಕೊಳ್ಳಲಿದೆ. ಸೌಥಾಂಪ್ಟನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ವಿಶ್ವಕಪ್‌ಗೂ ಮುನ್ನ ಭಾರತದ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ಸರಣಿ ಮಹತ್ವ ಪಡೆದಿದೆ.
ಲಂಡನ್: ಕಳೆದ ವಾರ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟಿ20 ಸರಣಿ ತನ್ನದಾಗಿಸಿಕೊಂಡಿದ್ದ ಭಾರತ ಮಹಿಳೆಯರ ತಂಡ ಈಗ ಏಕದಿನ ಸರಣಿಯನ್ನೂ ಕೈವಶಪಡಿಸಿಕೊಳ್ಳುವ ತವಕದಲ್ಲಿದೆ. ಶನಿವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ 2ನೇ ಏಕದಿನ ಪಂದ್ಯ ನಡೆಯಲಿದ್ದು, ಭಾರತ ಗೆದ್ದರೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 3 ಪಂದ್ಯಗಳ ಸರಣಿಯನ್ನು ಜಯಿಸಲಿದೆ.
ಸೌಥಾಂಪ್ಟನ್‌ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್‌ನಿಂದ ಗೆದ್ದಿತ್ತು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಸತತ 5ನೇ ಏಕದಿನ ಗೆದ್ದ ಸಾಧನೆ ಮಾಡಿದೆ. ಮುಂಬರುವ ಏಕದಿನ ವಿಶ್ವಕಪ್‌ಗೆ ಸಿದ್ಧತೆ ದೃಷ್ಟಿಯಿಂದ ಮಹತ್ವ ಪಡೆದಿರುವ ಈ ಸರಣಿಯಲ್ಲಿ ಗೆದ್ದರೆ, ಟೂರ್ನಿಗೂ ಮುನ್ನ ಭಾರತದ ಆತ್ಮವಿಶ್ವಾಸ ಹೆಚ್ಚಲಿದೆ.
ಸ್ಮೃತಿ ಮಂಧನಾ ಜೊತೆ ಆರಂಭಿಕ ಸ್ಥಾನಕ್ಕೆ ಉತ್ತಮ ಆಯ್ಕೆ ಎನಿಸಿಕೊಂಡಿರುವ ಪ್ರತಿಕಾ ರಾವಲ್ ವಿಶ್ವಕಪ್‌ಗೂ ಮುನ್ನ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ನಾಯಕ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗ್ಸ್, ಹರ್ಲಿನ್ ಡಿಯೋಲ್, ರಿಚಾ ಘೋಷ್ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭಗಳಾಗಿದ್ದು, ದೀಪ್ತಿ ಶರ್ಮಾ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ. ಸ್ಪಿನ್ ವಿಭಾಗದಲ್ಲಿ ಶ್ರೀ ಚರಣ, ಸ್ನೇಹ ರಾಣಾ, ರಾಧಾ ಯಾದವ್ ಮತ್ತೊಮ್ಮೆ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ಇನ್ನು, ಇಂಗ್ಲೆಂಡ್ ಈ ಸರಣಿಯುದ್ದಕ್ಕೂ ಸಾಧಾರಣ ಪ್ರದರ್ಶನ ನೀಡುತ್ತಿದ್ದು, ತವರಿನಲ್ಲಿ ಮತ್ತೊಂದು ಸರಣಿ ಸೋಲಿನ ಭೀತಿಯಲ್ಲಿದೆ. ಸುಧಾರಿತ ಪ್ರದರ್ಶನ ನೀಡಿದರಷ್ಟೇ ಶೀವರ್ ಬ್ರಂಟ್ ಸಾರಥ್ಯದ ತಂಡಕ್ಕೆ ಸರಣಿ ಸಮಬಲಗೊಳಿಸುವ ಅವಕಾಶ ಸಿಗಲಿದೆ.
ಪಂದ್ಯ: ಮಧ್ಯಾಹ್ನ 3.30ಕ್ಕೆ(ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲೈವ್, ಫ್ಯಾನ್‌ಕೋಡ್
ಭಾರತಕ್ಕೆ 9ನೇ ಸಲ ಸರಣಿ ಗೆಲ್ಲುವ ತವಕ
ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಈವರೆಗೂ 15 ಬಾರಿ ಏಕದಿನ ಸರಣಿಗಳನ್ನಾಡಿವೆ. ಈ ಪೈಕಿ 8ರಲ್ಲಿ ಭಾರತ ಗೆದ್ದಿದ್ದರೆ, ಇಂಗ್ಲೆಂಡ್ ತಂಡ 7ರಲ್ಲಿ ಜಯಗಳಿಸಿವೆ. ಇಂಗ್ಲೆಂಡ್ ನೆಲದಲ್ಲಿ 2 ಬಾರಿ ಏಕದಿನ ಸರಣಿ ತನ್ನದಾಗಿಸಿಕೊಂಡಿರುವ ಭಾರತ, ಮತ್ತೊಂದು ಸರಣಿ ಜಯದ ಮೇಲೆ ಕಣ್ಣಿಟ್ಟಿದೆ.
ಕ್ರಿಕೆಟರ್ ಪ್ರತಿಕಾಗೆ ದಂಡ
ದುಬೈ: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ಭಾರತದ ಮಹಿಳಾ ತಂಡದ ಆಟಗಾರ್ತಿ ಪ್ರತಿಕಾ ರಾವಲ್‌ಗೆ ಪಂದ್ಯದ ಸಂಭಾವನೆಯ ಶೇ.10ರಷ್ಟು ದಂಡ ವಿಧಿಸಲಾಗಿದೆ. ಅವರು ಪಂದ್ಯದ 18ನೇ ಓವರ್ ವೇಳೆ ಇಂಗ್ಲೆಂಡ್ ಬೌಲರ್ ಲಾರೆನ್ ಫಿಲೆರ್ ದೇಹಕ್ಕೆ ತಾಗಿದ್ದರು. ಇನ್ನು, ಪಂದ್ಯದಲ್ಲಿ ನಿಧಾನಗತಿ ಬೌಲ್ ಮಾಡಿದ್ದಕ್ಕೆ ಇಂಗ್ಲೆಂಡ್ ಆಟಗಾರ್ತಿಯರಿಗೆ ತಲಾ ಶೇ.5 ದಂಡ ಹೇರಲಾಗಿದೆ.
