ಮುಂಬೈ(ನ.21): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಮುಗಿದ  ಬಳಿಕ, ವೆಸ್ಟ್ ಇಂಡೀಸ್ ವಿರುದ್ದದ ಸರಣಿ ಆರಂಭವಾಗಲಿದೆ. 3 ಟಿ20 ಹಾಗೂ 3 ಏಕದಿನ ಪಂದ್ಯದ ಸರಣಿ ಡಿಸೆಂಬರ್ 6 ರಿಂದ ಆರಂಭವಾಗಲಿದೆ. ಇದೀಗ ಮುಂಬೈನಲ್ಲಿ ಆಯೋಜಿಸಲಾಗಿರುವ ಮೊದಲ ಟಿ20 ಪಂದ್ಯ ನಡೆಯುವುದೇ ಅನುಮಾನವಾಗಿದೆ.

ಇದನ್ನೂ ಓದಿ: ವಿಂಡೀಸ್ ಸರಣಿ: ರೋಹಿತ್‌ಗೆ ವಿಶ್ರಾಂತಿ, ಧವನ್‌ಗೆ ಕೊಕ್‌

ಡಿಸೆಂಬರ್ 6 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಆಯೋಜಿಸಲಾಗಿದೆ. ಆದರೆ ಈ ಪಂದ್ಯಕ್ಕೆ ಹಲವು ಅಡೆ ತಡೆಗಳು ಎದುರಾಗಿದೆ. ಮುಂಬೈ ಪಂದ್ಯಕ್ಕೆ ನೀಡಬೇಕಾದ ಪೊಲೀಸ್ ಭದ್ರತೆ ಕುರಿತು ಮುಂಬೈ ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಭದ್ರತಾ ಕಾರಣದಿಂದ ಪಂದ್ಯ ಬೇರೆಡೆಗೆ ಸ್ಥಳಾಂತರವಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

ಡಿಸೆಂಬರ್ 6 ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಇದೇ ದಿನ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಇಷ್ಟೇ ಅಲ್ಲ ಡಿಸೆಂಬರ್ 6 ಬಾಬ್ರಿ ಮಸೀದಿ ಧ್ವಂಸಗೊಳಿಸಿದ ದಿನ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದೀಗ ಮೊದಲ ಬಾರಿಗೆ ಬಾಬ್ರಿ ಧ್ವಂಸ ಪ್ರಕರಣದ ವರ್ಷಾಚರಣೆಗೆ ಹೆಚ್ಚಿನ ಪೊಲೀಸ‌ರನ್ನು ಮುಂಬೈ ನಗರದಲ್ಲಿ ನಿಯೋಜಿಸಲಾಗುತ್ತಿದೆ. ಈ ಮೂಲಕ ಅಹಿತಕರ ಘಟನೆ ತಡೆಗಟ್ಟಲು ಮುನ್ನಚ್ಚೆರಿಕಾ ಕ್ರಮ ಕೈಗೊಳ್ಳಲಾಗಿದೆ.

ಇಂದು(ನ.21) ಮುಂಬೈ ಪೊಲೀಸರು ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸಲಿದ್ದು, ವಾಂಖೆಡೆ ಹಾಗೂ ಬಿಸಿಸಿಐ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ನಾಳೆ ಸ್ಪಷ್ಟ ಚಿತ್ರಣ ಹೊರಬಲಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಹೇಳಿದೆ. ಮುಂಬೈನಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಕನಿಷ್ಠ 12000 ಪೊಲೀಸ್, 300  ಟ್ರಾಫಿಕ್ ಪೊಲೀಸ್ ಅವಶ್ಯಕತೆ ಇದೆ. ಸಭೆ ಬಳಿಕ ಮುಂಬೈ ಪಂದ್ಯ ಆಯೋಜನೆ ಕುರಿತು ಮಾಹಿತಿ ಹೊರಬೀಳಲಿದೆ.