Asianet Suvarna News Asianet Suvarna News

Asia Cup 2022 ಟೂರ್ನಿಗೂ ಮುನ್ನ ಕೊನೆಯ ಟಿ20 ಪಂದ್ಯವನ್ನಾಡಲು ಸಜ್ಜಾದ ಟೀಂ ಇಂಡಿಯಾ..!

ಭಾರತ-ವೆಸ್ಟ್ ಇಂಡೀಸ್ ನಡುವಿನ ಕೊನೆಯ ಟಿ20 ಪಂದ್ಯಕ್ಕೆ ಕ್ಷಣಗಣನೆ
ಈಗಾಗಲೇ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತ
ಏಷ್ಯಾಕಪ್ ಟಿ20 ಟೂರ್ನಿಗೂ ಮುನ್ನ ಕೊನೆಯ ಟಿ20 ಪಂದ್ಯವಾಡುತ್ತಿರುವ ಭಾರತ

India vs West Indies 5th ODI India all set for final rehearsal before Asia Cup 2022 kvn
Author
Bengaluru, First Published Aug 7, 2022, 3:47 PM IST

ಪ್ಲೋರಿಡಾ(ಆ.07): ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ, ಇದೀಗ ವಿಂಡೀಸ್ ಎದುರು ಕೊನೆಯ ಪಂದ್ಯವನ್ನಾಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಇದೀಗ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದೆ. ಆರಂಭದಲ್ಲಿ ಶಿಖರ್ ಧವನ್  ನೇತೃತ್ವದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರು 3 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿತ್ತು. ಇದಾದ ಬಳಿಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 3-1ರ ಮುನ್ನಡೆ ಸಾಧಿಸಿದೆ. 

ಇಂದು(ಆಗಸ್ಟ್ 07) ನಡೆಯಲಿರುವ 5ನೇ ಹಾಗೂ ಕೊನೆಯ ಟಿ20 ಪಂದ್ಯವು ಮುಂಬರುವ ಏಷ್ಯಾಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಕೊನೆಯ ಟಿ20 ಪಂದ್ಯ ಇದಾಗಲಿದೆ. ಈಗಾಗಲೇ ಟಿ20 ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿದ್ದರೂ ಸಹಾ, ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಗೆ ಪೂರ್ವಭಾವಿ ಅಭ್ಯಾಸ ನಡೆಸಲು ಈ ಪಂದ್ಯವನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.

ವಿಂಡೀಸ್ ಎದುರಿನ ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಸೂರ್ಯಕುಮಾರ್ ಯಾದವ್ ಹಾಗೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವ ಯುವ ವೇಗಿ ಆರ್ಶದೀಪ್ ಸಿಂಗ್ ಮಿಂಚುತ್ತಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಹಾಗೂ ಸಂಜು ಸ್ಯಾಮ್ಸನ್ ಕೂಡಾ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಮುಂಬರುವ ಏಷ್ಯಾಕಪ್ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಪ್ರಯೋಗ ಮಾಡುವ ಸಾಧ್ಯತೆಯಿದೆ.

ಇನ್ನೊಂದೆಡೆ ಹೊಡಿಬಡಿಯಾಟಕ್ಕೆ ಹೆಸರುವಾಸಿ ಎನಿಸಿಕೊಂಡಿರುವ ವೆಸ್ಟ್ ಇಂಡೀಸ್ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ತೋರಲು ವಿಫಲವಾಗಿದೆ. ನಿಕೋಲಸ್ ಪೂರನ್‌, ಶಿಮ್ರೊನ್ ಹೆಟ್ಮೇಯರ್, ರೋಮನ್ ಪೋವೆಲ್ ಅವರಂತಹ ಟಿ20 ಆಟಗಾರರು ಅಬ್ಬರಿಸಿದರೇ ಕೊನೆಯ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ಸಾಧ್ಯತೆಯಿದೆ.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ. 24 ಪಂದ್ಯಗಳ ಪೈಕಿ ಭಾರತ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ವೆಸ್ಟ್ ಇಂಡೀಸ್ ತಂಡವು 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯದಲ್ಲಿ ಫಲಿತಾಂಶ ಹೊರಬಂದಿರಲಿಲ್ಲ.

ಕೊನೆಯ ಟಿ20 ಪಂದ್ಯಕ್ಕೆ ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್ ಕೀಪರ್) ದಿನೇಶ್ ಕಾರ್ತಿಕ್, ರವಿಚಂದ್ರನ್‌ ಅಶ್ವಿನ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್. 

ವೆಸ್ಟ್ ಇಂಡಿಸ್: ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್‌, ನಿಕೋಲಸ್ ಪೂರನ್(ನಾಯಕ), ಶಿಮ್ರೊನ್ ಹೆಟ್ಮೇಯರ್, ಜೇಸನ್ ಹೋಲ್ಡರ್, ರೊಮ್ಯಾರಿಯೊ ಶೆಫರ್ಡ್‌, ಒಬೆಡ್ ಮೆಕಾಯ್, ಅಕೇಲ್ ಹೊಸೈನ್, ರೋಮನ್ ಪೊವೆಲ್, ಹೈಡನ್‌ ವಾಲ್ಷ್, ಒಡೆನ್ ಸ್ಮಿತ್

ಪಂದ್ಯ ಆರಂಭ: ರಾತ್ರಿ 9.30(ಭಾರತೀಯ ಕಾಲಮಾನ)

Follow Us:
Download App:
  • android
  • ios