* ಬೆಂಗಳೂರು ಟೆಸ್ಟ್‌ಗೂ ಮುನ್ನ ಗುಡ್‌ ನ್ಯೂಸ್ ಕೊಟ್ಟ ಬಿಸಿಸಿಐ* ಲಂಕಾ ಎದುರಿನ ಪಿಂಕ್ ಬಾಲ್ ಟೆಸ್ಟ್‌ಗೆ 100% ಪ್ರೇಕ್ಷಕರಿಗೆ ಅವಕಾಶ* ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್‌ಗೆ ಆತಿಥ್ಯ

ಬೆಂಗಳೂರು(ಮಾ.11): ಶನಿವಾರ(ಮಾ.12)ದಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ 2ನೇ ಟೆಸ್ಟ್‌ಗೆ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆಯುವ ಪಂದ್ಯಕ್ಕೂ ಮುನ್ನ ಬಿಸಿಸಿಐ (BCCI) ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದೆ. ಕ್ರೀಡಾಂಗಣಕ್ಕೆ ಶೇ.100ರಷ್ಟು ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ. ಈ ಮೊದಲು ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲು ಬಿಸಿಸಿಐ ಅನುಮತಿ ನೀಡಿತ್ತು. 

ಆದರೆ ಇದೀಗ ಕ್ರಿಕೆಟ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೋವಿಡ್‌ (COVID 19) ಅಬ್ಬರ ಸಹ ತಗ್ಗಿದೆ. ಹೀಗಾಗಿ ಕ್ರೀಡಾಂಗಣವನ್ನು ಭರ್ತಿ ಮಾಡಲು ಅವಕಾಶ ಸಿಕ್ಕಿದೆ. ಖಾಲಿ ಇರುವ ಆಸನಗಳಿಗೆ ಟಿಕೆಟ್‌ ಮಾರಾಟ ಶುಕ್ರವಾರ ನಡೆಯಲಿದ್ದು, ಬೆಳಗ್ಗೆ 10ರಿಂದ ಸಂಜೆ 7ರ ವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್‌ನಲ್ಲಿ ಖರೀದಿಸಬಹುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ.

ಪಿಂಕ್‌ ಬಾಲ್‌ ಟೆಸ್ಟ್‌ಗೆ ಭಾರತ ಕಠಿಣ ಅಭ್ಯಾಸ

ಬೆಂಗಳೂರು: ಶನಿವಾರದಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ಗೆ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಗುರುವಾರ ಸಂಜೆ ಭಾರತ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. ಮಧ್ಯಾಹ್ನ ಲಂಕಾ ತಂಡ ನೆಟ್ಸ್‌ನಲ್ಲಿ ಬೆವರಿಳಿಸಿತು.

ಅಶ್ವಿನ್‌ ಸರ್ವಕಾಲಿಕ ಶ್ರೇಷ್ಠ ಆಟಗಾರ ಅಲ್ಲ.. ರೋಹಿತ್‌ ಬಾಯ್ತಪ್ಪಿ ಹೇಳಿರಬಹುದು...

ಭಾರತದಲ್ಲಿ ಇದುವರೆಗೂ 2 ಹಗಲು-ರಾತ್ರಿ ಟೆಸ್ಟ್‌ಗಳು (Pink Ball Test) ನಡೆದಿದ್ದು, ಎರಡರಲ್ಲೂ ಭಾರತ ತಂಡ ಜಯಭೇರಿ ಬಾರಿಸಿದೆ. ಕೋಲ್ಕತಾದಲ್ಲಿ ಬಾಂಗ್ಲಾದೇಶ ವಿರುದ್ಧ ಜಯಿಸಿದ್ದ ಟೀಂ ಇಂಡಿಯಾ(Team India), ಅಹಮದಾಬಾದ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಕೇವಲ 2 ದಿನಗಳಲ್ಲಿ ಸೋಲಿಸಿತ್ತು. ತವರಿನಲ್ಲಿ ಹ್ಯಾಟ್ರಿಕ್‌ ಪಿಂಕ್‌ ಬಾಲ್‌ ಟೆಸ್ಟ್‌ ಗೆಲುವು ಸಾಧಿಸಲು ಭಾರತ ಎದುರು ನೋಡುತ್ತಿದೆ.

ಸಸೆಕ್ಸ್‌ ಕೌಂಟಿ ಪರ ಆಡಲಿರುವ ಪೂಜಾರ

ಹೋವ್‌(ಇಂಗ್ಲೆಂಡ್‌): ಭಾರತ ಟೆಸ್ಟ್‌ ತಂಡದಿಂದ ಹೊರಬಿದ್ದಿರುವ ಚೇತೇಶ್ವರ್‌ ಪೂಜಾರ (Cheteshwar Pujara), ಏಪ್ರಿಲ್ 7ರಿಂದ ಆರಂಭಗೊಳ್ಳಲಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್‌ ತಂಡದ ಪರ ಆಡಲಿದ್ದಾರೆ. ಆಸ್ಪ್ರೇಲಿಯಾದ ಟ್ರ್ಯಾವಿಸ್‌ ಹೆಡ್‌ ಬದಲು ಪೂಜಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಪ್ರಥಮ ದರ್ಜೆ ಹಾಗೂ ಲಿಸ್ಟ್‌ ‘ಎ’ ಪಂದ್ಯಗಳಲ್ಲಿ ಆಡಲಿದ್ದು, ಈ ಋುತುವಿನ ಅಂತ್ಯದೊರೆಗೂ ತಂಡದಲ್ಲಿರಲಿದ್ದಾರೆ.

ಎಲ್ಲಾ ಮಾದರಿ ಕ್ರಿಕೆಟ್‌ಗೆ ಶ್ರೀಶಾಂತ್‌ ಗುಡ್‌ಬೈ

ನವದೆಹಲಿ: ಭಾರತದ ವೇಗಿ ಎಸ್‌.ಶ್ರೀಶಾಂತ್‌ ಬುಧವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಷಯವನ್ನು ಅವರು ಟ್ವೀಟರಲ್ಲಿ ಬಹಿರಂಗಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್‌(87 ವಿಕೆಟ್‌), 53 ಏಕದಿನ(75 ವಿಕೆಟ್‌) ಹಾಗೂ 10 ಟಿ20(7 ವಿಕೆಟ್‌) ಪಂದ್ಯಗಳನ್ನು ಆಡಿರುವ ಅವರು, 2013ರಲ್ಲಿ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಆಜೀವ ನಿಷೇಧಕ್ಕೆ ಒಳಗಾಗಿದ್ದರು. 

ನಿಷೇಧದ ವಿರುದ್ಧ ಕಾನೂನು ಸಮರ ನಡೆಸಿದ್ದ ಶ್ರೀಶಾಂತ್‌, 2020ರಲ್ಲಿ ಮತ್ತೆ ಕ್ರಿಕೆಟ್‌ಗೆ ವಾಪಸಾಗಿದ್ದರು. ಕೇರಳ ಪರ ದೇಸಿ ಟೂರ್ನಿಗಳಲ್ಲಿ ಆಡಿದ್ದ ಅವರು ಇತ್ತೀಚೆಗೆ ಐಪಿಎಲ್‌ ಹರಾಜಿನಲ್ಲೂ ಪಾಲ್ಗೊಂಡಿದ್ದರು. ಆದರೆ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಶ್ರೀಶಾಂತ್‌ ಒಟ್ಟು 74 ಪ್ರ.ದರ್ಜೆ, 92 ಲಿಸ್ಟ್‌ ‘ಎ’ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಮೆಲ್ಬರ್ನ್‌ಗೆ ವಾರ್ನ್‌ರ ಪಾರ್ಥೀವ ಶರೀರ

ಮೆಲ್ಬರ್ನ್‌: ಕಳೆದ ವಾರ ಹೃದಯಾಘಾತದಿಂದ ಹಠಾತ್‌ ನಿಧನರಾದ ಸ್ಪಿನ್‌ ದಂತಕಥೆ ಶೇನ್‌ ವಾರ್ನ್‌ರ (Shane Warne) ಪಾರ್ಥೀವ ಶರೀರ ಗುರುವಾರ ಮೆಲ್ಬರ್ನ್‌ ತಲುಪಿತು. ಥಾಯ್ಲೆಂಡ್‌ನಿಂದ ವಿಶೇಷ ವಿಮಾನದಲ್ಲಿ ಮೃತ ದೇಹವನ್ನು ತರಲಾಯಿತು. ವಾರ್ನ್‌ರ ಮೃತ ದೇಹವನ್ನಿರಿಸಿದ್ದ ಶವದ ಪೆಟ್ಟಿಗೆಗೆ ಆಸ್ಪ್ರೇಲಿಯಾದ ಧ್ವಜವನ್ನು ಹೊದಿಸಲಾಗಿತ್ತು. ಸದ್ಯದಲ್ಲೇ ವಾರ್ನ್‌ರ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.