ಗುವಾಹಟಿ[ಜ.05]: ಇಂಡೋ-ಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದೆ. ವರ್ಷದ ಮೊದಲ ಪಂದ್ಯವೇ ಮಳೆಯಿಂದ ರದ್ದಾಯಿತು.

ಗುವಾಹಟಿಯ ಬರ್ಸಾಪುರ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಟಾಸ್ ಮುಗಿದ ಬೆನ್ನಲ್ಲೇ ನಿರಂತರ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು ಕೆಲಕಾಲ ಮುಂದೂಡಲಾಯಿತು. ಪಿಚ್ ಒದ್ದೆಯಾಗಿದ್ದರಿಂದ ಹೇರ್ ಡ್ರೈಯರ್ ಹಾಗೂ ಐರನ್ ಬಾಕ್ಸ್ ಬಳಸಿ ಒಣಗಿಸಲು ಪ್ರಯತ್ನಿಸಲಾಯಿತು. ಅಂಪೈರ್ ಮತ್ತೊಮ್ಮೆ 9.30ರ ವೇಳೆಗೆ ಪಿಚ್ ಪರಿಶೀಲನೆ ನಡೆಸಿದರು. ಆದರೂ ಔಟ್ ಫೀಲ್ಡ್ ಒದ್ದೆಯಾಗಿದ್ದರಿಂದ ರಿಸ್ಕ್ ತೆಗೆದುಕೊಳ್ಳಲು ಮ್ಯಾಚ್ ರೆಫ್ರಿ ಮುಂದಾಗಲಿಲ್ಲ. ಹೀಗಾಗಿ ಪಂದ್ಯ ರದ್ದು ಮಾಡುವ ತೀರ್ಮಾನಕ್ಕೆ ಬರಲಾಯಿತು.

ತಡವಾಗಿ ಆರಂಭವಾಗತ್ತೆ ಮೊದಲ ಟಿ20 ಪಂದ್ಯ..!

ಪಿಚ್ ಮುಚ್ಚಲು ಸೂಕ್ತ ವ್ಯವಸ್ಥೆ ಮಾಡದಿರುವುದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ವರ್ಷದ ಮೊದಲ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದ ಅಭಿಮಾನಿಗಳ ಆಸೆಗೆ ವರುಣರಾಯ ನಿರಾಸೆಯನ್ನುಂಟು ಮಾಡಿದ. ಇದೀಗ ಎರಡನೇ ಪಂದ್ಯ ಜನವರಿ 7ರಂದು ಇಂದೋರಿನ ಹೋಲ್ಕರ್ ಮೈದಾನದಲ್ಲಿ ನಡೆಯಲಿದೆ. ಭಾರತ ಒಂದುವೇಳೆ ಸರಣಿ ಗೆಲ್ಲಬೇಕಿದ್ದರೆ, ಉಳಿದೆರಡು ಪಂದ್ಯಗಳನ್ನು ಗೆಲ್ಲಬೇಕಾದ ಅನಿವಾರ್ಯತೆಗೆ ಸಿಲುಕಿದೆ.