* ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಕ್ಷಣಗಣನೆ ಆರಂಭ* ಭಾರತ-ಪಾಕಿಸ್ತಾನ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತ ಫ್ಯಾನ್ಸ್* ಇಂಡೋ-ಪಾಕ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್‌

ದುಬೈ(ಆ.16): ಆಗಸ್ಟ್ 28ರಂದು ನಡೆಯಲಿರುವ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಟಿ20 ಪಂದ್ಯದ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಸೋಮವಾರ ಸಂಜೆ 7.30(ಭಾರತೀಯ ಕಾಲಮಾನ)ಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ ಆರಂಭಗೊಂಡಿತು. ಕೆಲವೇ ನಿಮಿಷಗಳಲ್ಲಿ ಟಿಕೆಟ್‌ಗಳು ಸೋಲ್ಡ್‌ಔಟ್‌ ಆದವು ಎಂದು ಆಯೋಜಕರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಮಧ್ಯಾಹ್ನ 2.30(ಭಾರತೀಯ ಕಾಲಮಾನ) ಟಿಕೆಟ್‌ ಮಾರಾಟ ಶುರುವಾಗಬೇಕಿತ್ತು. ಆದರೆ ಒಮ್ಮೆಲೆ ಲಕ್ಷಾಂತರ ಮಂದಿ ವೆಬ್‌ಸೈಟ್‌ಗೆ ಭೇಟಿ ನೀಡಿದ ಕಾರಣ ವೆಬ್‌ಸೈಟ್‌ ಕ್ರಾಷ್‌ ಆಗಿ, ದುರಸ್ಥಿ ಮಾಡಲು ಕೆಲ ಗಂಟೆಗಳಾದವು. ಆಯೋಜಕರ ಪ್ರಕಾರ ಲಭ್ಯವಿದ್ದ 20000 ಟಿಕೆಟ್‌ಗಳನ್ನು ಖರೀದಿಸಲು 7.5 ಲಕ್ಷ ಮಂದಿ ಸರದಿ ಸಾಲಿನಲ್ಲಿದ್ದರು ಎಂದು ತಿಳಿದುಬಂದಿದೆ.

ಏಷ್ಯಾಕಪ್‌ನಲ್ಲಿ ಭಾರತ-ಪಾಕ್‌ ಕನಿಷ್ಠ ಎರಡು ಬಾರಿ ಮುಖಾಮುಖಿ..!

ಈಗಾಗಲೇ ಏಷ್ಯಾಕಪ್‌ ಟಿ20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಆಗಸ್ಟ್‌ 28ರಂದು ಮುಖಾಮುಖಿಯಾಗಲಿವೆ. ಆಗಸ್ಟ್‌ 27ರಿಂದ ಆರಂಭಗೊಳ್ಳಲಿರುವ ಟೂರ್ನಿ, ಸೆಪ್ಟೆಂಬರ್ 11ರ ವರೆಗೂ ನಡೆಯಲಿದೆ. ಕನಿಷ್ಠ 2 ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಣಸುವಂತೆ ವೇಳಾಪಟ್ಟಿಸಿದ್ಧಪಡಿಸಲಾಗಿದೆ.

ಭಾರತ, ಪಾಕಿಸ್ತಾನ ಮತ್ತು ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡವನ್ನು ‘ಎ’ ಗುಂಪಿನಲ್ಲಿ ಸ್ಥಾನಪಡೆದರೇ, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ತಂಡಗಳಿವೆ. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಸೂಪರ್‌-4 ಹಂತಕ್ಕೇರಲಿದ್ದು, ಇಲ್ಲಿ ಪ್ರತಿ ತಂಡವು ರೌಂಡ್ ರಾಬಿನ್ ಮಾದರಿಯಂತೆ ಇನ್ನುಳಿದ 3 ತಂಡಗಳ ವಿರುದ್ಧ ಆಡಲಿದೆ. ಸೂಪರ್‌-4 ಹಂತದಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್‌ ಪ್ರವೇಶಿಸಲಿವೆ.

Asia Cup 2022: ಬ್ಯಾಟಿಂಗ್, ಬೌಲಿಂಗ್, ಆಲ್ರೌಂಡ್‌ನ ಈ 3 ರೆಕಾರ್ಡ್ಸ್‌ ಧೂಳೀಪಟವಾಗೋದು ಗ್ಯಾರಂಟಿ..!

ಭಾರತ ಹಾಗೂ ಪಾಕಿಸ್ತಾನ ‘ಎ’ ಗುಂಪಿನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದು, ಸೂಪರ್‌-4 ಹಂತದಲ್ಲೂ ಸೆಣಸುವುದು ಬಹುತೇಕ ಖಚಿತ ಎಂದೇ ವಿಶ್ಲೇಷಿಸಲಾಗಿದೆ. ಒಂದೊಮ್ಮೆ ಉಭಯ ತಂಡಗಳು ಫೈನಲ್‌ ಪ್ರವೇಶಿಸಿದರೆ, ಅಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ದೊರೆಯಲಿದೆ. ಏಷ್ಯಾಕಪ್ ಫೈನಲ್ ಪಂದ್ಯವು ಸೆಪ್ಟೆಂಬರ್ 11ರಂದು ನಡೆಯಲಿದ್ದು, ಪ್ರಶಸ್ತಿಗಾಗಿ ಇದೇ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾದರೂ ಅಚ್ಚರಿಯಿಲ್ಲ.

ಏಷ್ಯಾಕಪ್‌: ಟೀಂ ಇಂಡಿಯಾ ಆಟಗಾರರಿಗೆ ಫಿಟ್ನೆಸ್‌ ಪರೀಕ್ಷೆ

ನವದೆಹಲಿ: ಆಗಸ್ಟ್‌ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್‌ ಟಿ20 ಟೂರ್ನಿಗೂ ಮುನ್ನ ಭಾರತ ಕ್ರಿಕೆಟ್‌ ತಂಡದ ಆಟಗಾರರು ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ. ಆಟಗಾರರು ಆ.18ರಿಂದ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದು, ಆ.20ಕ್ಕೆ ದುಬೈಗೆ ತೆರಳಲಿದ್ದಾರೆ. ಬಳಿಕ ದುಬೈನಲ್ಲೇ 3 ದಿನ ತರಬೇತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ ಎಂದು ಗೊತ್ತಾಗಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ

ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌.ರಾಹುಲ್‌(ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ದೀಪಕ್‌ ಹೂಡಾ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ಯಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌, ಭುವನೇಶ್ವರ್‌ ಕುಮಾರ್‌, ಅಶ್‌ರ್‍ದೀಪ್‌ ಸಿಂಗ್‌, ಆವೇಶ್‌ ಖಾನ್‌.

ಮೀಸಲು ಆಟಗಾರರು: ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌.