* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದ ರದ್ದು* ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ನಡೆಯಬೇಕಿದ್ದ ಅಭ್ಯಾಸ ಪಂದ್ಯ* ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಗೆದ್ದು ಬೀಗಿದ್ದ ಭಾರತ

ಬ್ರಿಸ್ಬೇನ್(ಅ.19): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸಿದ ಪರಿಣಾಮ ಪಂದ್ಯವನ್ನು ರದ್ದು ಪಡಿಸಲಾಗಿದೆ. ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೂ ಮುನ್ನ ಜೋರಾಗಿ ಮಳೆ ಸುರಿದಿದ್ದರಿಂದಾಗಿ ಪಂದ್ಯ ಆರಂಭ ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿ ತಿಳಿಸಿತ್ತು, ಆದರೆ ಇದೀಗ ಪಂದ್ಯ ರದ್ದಾಗಿರುವುದಾಗಿ ಬಿಸಿಸಿಐ ಖಚಿತಪಡಿಸಿದೆ.

ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಅಭ್ಯಾಸ ಪಂದ್ಯಕ್ಕೂ ಮಳೆರಾಯ ಅಡ್ಡಿಪಡಿಸಿದ್ದರಿಂದಾಗಿ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಇನ್ನೂ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮೈದಾನದುದ್ದಕ್ಕೂ ಟಾರ್ಪಲ್‌ನಿಂದ ಮುಚ್ಚಲಾಗಿತ್ತು. ಆದರೆ ನಿರಂತರವಾಗಿ ಮಳೆ ಸುರಿದ ಪರಿಣಾಮ ಈ ಅಭ್ಯಾಸ ಪಂದ್ಯ ಇದೀಗ ರದ್ದಾಗಿದೆ. 

Scroll to load tweet…

ಅಕ್ಟೋಬರ್ 17ರಂದು ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 6 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲ್ಲಲು ಕೇವಲ 11 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡ ಅನುಭವಿ ವೇಗಿ ಮೊಹಮ್ಮದ್ ಶಮಿ, ಕೇವಲ 4 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದಿತ್ತಿದ್ದರು. ಇದೀಗ ಭಾರತ ತಂಡವು ಸೂಪರ್ 12 ಹಂತದ ಪಂದ್ಯಕ್ಕೂ ಮುನ್ನ ತನ್ನ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಿಕೊಳ್ಳಲು ಕೊನೆಯ ಅವಕಾಶವಾಗಿತ್ತು. ಆದರೆ ಇದಕ್ಕೆ ಮಳೆರಾಯ ಅವಕಾಶ ಮಾಡಿಕೊಟ್ಟಿಲ್ಲ.

T20 World Cup: ಈ ಬಾರಿ ಸೆಮೀಸ್‌ಗೇರುವ 4 ತಂಡಗಳಾವುವು ಎನ್ನುವುದನ್ನು ಭವಿಷ್ಯ ನುಡಿದ ಸಚಿನ್ ತೆಂಡುಲ್ಕರ್..!

ರೋಹಿತ್ ಶರ್ಮಾ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 23ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ. ಕಳೆದ ವರ್ಷ ಯುಎಇನ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ಎದುರು ಮುಗ್ಗರಿಸುವ ಮೂಲಕ ಮುಖಭಂಗ ಅನುಭವಿಸಿತ್ತು. ಇದೀಗ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಶದೀಪ್ ಸಿಂಗ್, ಮೊಹಮ್ಮದ್ ಶಮಿ.

ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ

ಕೇನ್ ವಿಲಿಯಮ್ಸನ್‌(ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್‌, ಜೇಮ್ಸ್ ನೀಶಮ್, ಡೇರಲ್ ಮಿಚೆಲ್, ಆಡಂ ಮಿಲ್ನೆ, ಮಾರ್ಟಿನ್ ಗಪ್ಟಿಲ್, ಲಾಕಿ ಫರ್ಗ್ಯೂಸನ್, ಡೆವೊನ್ ಕಾನ್‌ವೆ, ಮಾರ್ಕ್‌ ಚಾಂಪ್ಮನ್, ಮಿಚೆಲ್ ಬ್ರಾಸ್‌ವೆಲ್, ಟ್ರೆಂಟ್ ಬೌಲ್ಟ್, ಫಿನ್ ಅಲೆನ್.