ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ನ್ಯೂಜಿಲೆಂಡ್ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಗಾಯ ಹಾಗೂ ವರ್ಕ್‌ಲೋಡ್ ನಿರ್ವಹಣೆ ಕಾರಣದಿಂದ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗ್ಯೂಸನ್ ಅವರಂತಹ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಬೌಲಿಂಗ್ ವಿಭಾಗವನ್ನು ಬಲಪಡಿಸಲು ಬ್ಲೈರ್ ಟಿಕ್ನರ್ ಹಾಗೂ ಜೋಶ್ ಕ್ಲಾರ್ಕ್‌ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕ್ರೈಸ್ಟ್‌ಚರ್ಚ್: ಭಾರತ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ಒತ್ತಡಕ್ಕೆ ಸಿಲುಕಿರುವ ನ್ಯೂಜಿಲೆಂಡ್ ತಂಡದಲ್ಲಿ ಇದೀಗ ಮೇಜರ್ ಸರ್ಜರಿಯಾಗಿದೆ. ಹೀಗಿರುವಾಗಲೇ ಟೀಮ್‌ ಮ್ಯಾನೇಜರ್‌ಮೆಂಟ್ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ಮುಂಬರುವ ಏಕದಿನ ಸರಣಿ ಹಾಗೂ ಟೆಸ್ಟ್ ಸರಣಿ ಗಮನದಲ್ಲಿಟ್ಟುಕೊಂಡು ವರ್ಕ್‌ಲೋಡ್ ಮ್ಯಾನೇಜ್‌ ಮಾಡುವ ಉದ್ದೇಶದಿಂದ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿದೆ.

ಟಿ20 ಸರಣಿಯಿಂದ ಮ್ಯಾಟ್ ಹೆನ್ರಿ ಔಟ್:

ಕಿವೀಸ್ ಮಾರಕ ವೇಗಿ ಮ್ಯಾಟ್ ಹೆನ್ರಿ ಇದೀಗ, ಭಾರತ ಎದುರಿನ ಇನ್ನುಳಿದ ಮೂರು ಟಿ20 ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಮ್ಯಾಟ್ ಹೆನ್ರಿ ಇದೀಗ ಕ್ರೈಸ್ಟ್‌ಚರ್ಚ್‌ನಲ್ಲಿಯೇ ಉಳಿದುಕೊಂಡಿದ್ದು, ನವೆಂಬರ್ 02ರಂದು ಆಕ್ಲೆಂಡ್‌ನಲ್ಲಿ ಏಕದಿನ ಸರಣಿಗಾಗಿ ಕಿವೀಸ್ ತಂಡ ಕೂಡಿಕೊಳ್ಳಲಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯು ನವೆಂಬರ್ 04ರಿಂದ ಆರಂಭವಾಗಲಿದೆ.

ಭಾರತ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಮ್ಯಾಟ್ ಹೆನ್ರಿ ಮೇಡನ್ ಓವರ್ ಮಾಡಿ ಗಮನ ಸೆಳೆದಿದ್ದರು. ಆದರೆ ಆ ಪಂದ್ಯದಲ್ಲಿ ಕೇವಲ ಎರಡು ಓವರ್ ಬೌಲಿಂಗ್ ಮಾಡಲಷ್ಟೇ ಶಕ್ತರಾಗಿದ್ದರು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ್ದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ವೇಗಿ ಹೆನ್ರಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಎಂದಿದ್ದರು.

ಮೂರನೇ ಟಿ20 ಪಂದ್ಯದಲ್ಲಿ ಲಾಕಿ ಫರ್ಗ್ಯೂಸನ್ ಔಟ್

ಇನ್ನು ಕಿವೀಸ್ ಪ್ರಮುಖ ವೇಗಿ ಲಾಕಿ ಫರ್ಗ್ಯೂಸನ್ ಕೂಡಾ ಇದೀಗ ಮೂರನೇ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ ಅವರು ಭಾರತ ಎದುರಿನ ಆಕ್ಲೆಂಡ್ ಹಾಗೂ ಹ್ಯಾಮಿಲ್ಟನ್‌ನಲ್ಲಿ ನಡೆಯಲಿರುವ ಕೊನೆಯ ಎರಡು ಪಂದ್ಯಗಳಲ್ಲಿ ತಂಡ ಕೂಡಿಕೊಳ್ಳುವ ನಿರೀಕ್ಷೆಯಿದೆ. ಇನ್ನು ನೀಳಕಾಯದ ವೇಳಿ ಕೈಲ್ ಜೇಮಿಸನ್ ಮೂರನೇ ಪಂದ್ಯದ ಬಳಿಕ ವೆಲ್ಲಿಂಗ್ಟನ್‌ನಲ್ಲಿಯೇ ಉಳಿದುಕೊಳ್ಳಲಿದ್ದು, ಬೇಸಿನ್ ರಿಸರ್ವ್‌ನಲ್ಲಿ ನಡೆಯಲಿರುವ ಫೋರ್ಡ್ ಟ್ರೋಫಿಯಲ್ಲಿ ಕ್ಯಾಂಟರ್‌ಬರಿ ತಂಡದ ಪರ ಆಡಲಿದ್ದಾರೆ. ಹೀಗಾಗಿ, ಅವರು ಅಂತಿಮ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿಯಲಿದ್ದು, ಆ ಬಳಿಕ ಏಕದಿನ ಸರಣಿಗಾಗಿ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕಿವೀಸ್ ತಂಡ ಸೇರಿದ ಬ್ಲೈರ್ ಟಿಕ್ನರ್ ಮತ್ತು ಜೋಶ್ ಕ್ಲಾರ್ಕ್‌ಸನ್:

ಇದೀಗ ಕಿವೀಸ್ ತಂಡವು ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಲು ವೇಗಿಗಳಾದ ಬ್ಲೈರ್ ಟಿಕ್ನರ್ ಹಾಗೂ ಜೋಶ್ ಕ್ಲಾರ್ಕ್‌ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಟಿಕ್ನನರ್‌ ಭಾರತ ಎದುರಿನ ಕೊನೆಯ ಮೂರು ಪಂದ್ಯಗಳಿಗೆ ತಂಡ ಸೇರಿಕೊಂಡರೆ, ಕ್ಲಾರ್ಕ್‌ಸನ್ ಭಾರತ ಎದುರಿನ ಕೊನೆಯ ಎರಡು ಪಂದ್ಯಗಳಿಗೆ ಲಭ್ಯವಿರಲಿದ್ದಾರೆ.

ಭಾರತಕ್ಕೆ ತಿರುಗೇಟು ನೀಡುತ್ತಾ ನ್ಯೂಜಿಲೆಂಡ್?

ನ್ಯೂಜಿಲೆಂಡ್ ತಂಡವು ಇದೀಗ ಮೊದಲೆರಡು ಪಂದ್ಯ ಮುಕ್ತಾಯದ ಬಳಿಕ 0-2ರ ಹಿನ್ನಡೆಯಲ್ಲಿದೆ. ಸರಣಿಯಲ್ಲಿ ಇನ್ನೊಂದು ಪಂದ್ಯ ಸೋತರೂ ಟಿ20 ಸರಣಿ ಭಾರತ ತಂಡದ ಪಾಲಾಗಲಿದೆ. ಇನ್ನೊಂದೆಡೆ ಮೂರನೇ ಟಿ20 ಪಂದ್ಯವು ಕಿವೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಆತಿಥೇಯ ಕಿವೀಸ್ ತಂಡವು ಭಾರತಕ್ಕೆ ಕಠಿಣ ಸವಾಲು ನೀಡುವ ನಿರೀಕ್ಷೆಯಲ್ಲಿದೆ.