ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡವು ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಸೆಣಸಾಡಲಿದೆ. ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ತಂಡಕ್ಕೆ ಬೂಮ್ರಾ, ಹಾರ್ದಿಕ್‌ ಪಾಂಡ್ಯರ ವಾಪಸಾತಿಯಿಂದ ಬಲ ಬಂದಿದ್ದು, ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.  

ನಾಗ್ಪುರ: ಫೆ.7ರಂದು ಐಸಿಸಿ ಟಿ20 ವಿಶ್ವಕಪ್‌ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಕೊನೆ ಹಂತದ ಕಸರತ್ತು ಎಂಬಂತೆ ಭಾರತ ತಂಡವು ಬುಧವಾರದಿಂದ ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ ಕಣಕ್ಕಿಳಿಯಲಿದೆ. ವಿಶ್ವಕಪ್‌ಗೂ ಮುನ್ನ ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಸದ್ಯ ಸೂರ್ಯಕುಮಾರ್‌ ಯಾದವ್‌ ನಾಯಕತ್ವ ತಂಡದ ಪ್ರಮುಖ ಗುರಿ.

2024ರಲ್ಲಿ ಸೂರ್ಯ ಭಾರತದ ನಾಯಕರಾಗಿ ಆಯ್ಕೆಯಾಗಿದ್ದು, ಅವರ ಸಾರಥ್ಯದಲ್ಲಿ ತಂಡ 25 ಟಿ20 ಪಂದ್ಯಗಳಲ್ಲಿ 18ರಲ್ಲಿ ಗೆದ್ದಿದೆ. ತಂಡದ ಪ್ರದರ್ಶನ ಉತ್ತಮವಾಗಿಯೇ ಇದ್ದರೂ ಕೆಲ ವಿಭಾಗದಲ್ಲಿ ಸಮಸ್ಯೆಗಳಿವೆ. ಪ್ರಮುಖವಾಗಿ ಸೂರ್ಯಕುಮಾರ್‌ ತೀರಾ ಕಳಪೆ ಆಟವಾಡುತ್ತಿದ್ದಾರೆ. ಕಳೆದ ವರ್ಷ 21 ಪಂದ್ಯಗಳಲ್ಲಿ 13.62ರ ಸರಾಸರಿಯಲ್ಲಿ ಕೇವಲ 218 ರನ್‌ ಗಳಿಸಿದ್ದು, ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಉಳಿದಂತೆ ಬುಮ್ರಾ, ಹಾರ್ದಿಕ್‌ ಪಾಂಡ್ಯ, ವರುಣ್‌ ಚಕ್ರವರ್ತಿ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಇಶಾನ್‌ ಕಿಶನ್‌ಗೆ ಸ್ಥಾನ:

3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ತಿಲಕ್‌ ವರ್ಮಾ ಗಾಯಗೊಂಡು ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಇಶಾನ್‌ ಕಿಶನ್‌ ಹಾಗೂ ಶ್ರೇಯಸ್‌ ನಡುವೆ ಪೈಪೋಟಿಯಿತ್ತು. ಆದರೆ ತಿಲಕ್‌ ಸ್ಥಾನದಲ್ಲಿ ಇಶಾನ್‌ ಆಡಲಿದ್ದಾರೆ ಎಂದು ಸೂರ್ಯಕುಮಾರ್‌ ಖಚಿತಪಡಿಸಿದ್ದಾರೆ. ಉಳಿದಂತೆ ಅರ್ಶ್‌ದೀಪ್‌ ಸಿಂಗ್‌ ಹಾಗೂ ಕುಲ್ದೀಪ್‌ ಯಾದವ್‌ ನಡುವೆ ಪೈಪೋಟಿ ಇದೆ.

ಸರಣಿ ಮೇಲೆ ಕಣ್ಣು:

ನ್ಯೂಜಿಲೆಂಡ್‌ ತಂಡ ಒಂದು ವರ್ಷ ಅವಧಿಯಲ್ಲಿ ಭಾರತದ ನೆಲದಲ್ಲಿ ಚೊಚ್ಚಲ ಟೆಸ್ಟ್‌, ಏಕದಿನ ಸರಣಿ ಗೆದ್ದಿದೆ. ತಂಡಕ್ಕೆ ಈಗ ಟಿ20 ಸರಣಿ ಮೇಲೆ ಕಣ್ಣಿದೆ. 2012ರಲ್ಲಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದಿದ್ದು ಬಿಟ್ಟರೆ ಕಿವೀಸ್‌ ತಂಡ ಭಾರತದಲ್ಲಿ ಒಮ್ಮೆಯೂ ಟಿ20 ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿ ಸಾಧಿಸುವ ವಿಶ್ವಾಸದಲ್ಲಿದೆ. ತಂಡ ಮಿಚೆಲ್‌ ಸ್ಯಾಂಟ್ನರ್‌ ನಾಯಕತ್ವದಲ್ಲಿ ಆಡಲಿದೆ.

ಕಳೆದ ವಿಶ್ವಕಪ್‌ ಬಳಿಕ ಭಾರತದಲ್ಲಿ 8 ಸರಣಿ, 29 ಪಂದ್ಯದಲ್ಲಿ ಗೆಲುವು

ಭಾರತ ತಂಡ 2024ರಲ್ಲಿ ಟಿ20 ವಿಶ್ವಕಪ್‌ ಗೆದ್ದಿತ್ತು. ಆ ಬಳಿಕ ತಂಡ ಒಟ್ಟು 36 ಟಿ20 ಪಂದ್ಯಗಳನ್ನಾಡಿದೆ. ಇದರಲ್ಲಿ 29ರಲ್ಲಿ ಗೆದ್ದಿದ್ದರೆ, ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ಇನ್ನು, ವಿಶ್ವಕಪ್‌ ಬಳಿಕ ನಡೆದ ಟಿ20 ಸರಣಿಗಳಲ್ಲೂ ಭಾರತ ಗೆಲುವು ತನ್ನದಾಗಿಸಿಕೊಂಡಿದೆ. 2026ರ ವಿಶ್ವಕಪ್‌ಗೂ ಮುನ್ನ ಅಜೇಯ ದಾಖಲೆ ಕಾಯ್ದುಕೊಳ್ಳುವುದು ಭಾರತದ ಮುಂದಿರುವ ಪ್ರಮುಖ ಗುರಿ.

ಸಂಭಾವ್ಯ ತಂಡ:

ಭಾರತ: ಅಭಿಷೇಕ್‌, ಸ್ಯಾಮ್ಸನ್‌, ಇಶಾನ್‌, ಸೂರ್ಯಕುಮಾರ್‌(ನಾಯಕ), ಹಾರ್ದಿಕ್‌, ಅಕ್ಷರ್‌, ರಿಂಕು ಸಿಂಗ್‌, ಹರ್ಷಿತ್‌/ದುಬೆ, ಅರ್ಶ್‌ದೀಪ್‌/ಕುಲ್ದೀಪ್‌, ಬೂಮ್ರಾ, ವರುಣ್‌.

ಕಿವೀಸ್‌: ರಾಬಿನ್ಸನ್‌, ಕಾನ್‌ವೇ, ರಚಿನ್‌, ಡ್ಯಾರಿಲ್‌ ಮಿಚೆಲ್‌, ಫಿಲಿಪ್ಸ್‌, ಮಾರ್ಕ್‌ ಚಾಪ್ಮನ್‌, ನೀಶಮ್‌, ಸ್ಯಾಂಟ್ನರ್‌(ನಾಯಕ), ಮ್ಯಾಟ್‌ ಹೆನ್ರಿ, ಇಶ್‌ ಸೋಧಿ, ಜೇಕಬ್ ಡಫಿ

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌: ನಾಗ್ಪುರ ಪಿಚ್ ಹೆಚ್ಚಿನ ಬೌನ್ಸ್‌, ವೇಗಕ್ಕೆ ಹೆಸರುವಾಸಿ. ಇಲ್ಲಿ ವೇಗಿಗಳು ಹೆಚ್ಚಿನ ನೆರವು ಪಡೆದ ಉದಾಹರಣೆಗಳಿವೆ. ಈ ಕ್ರೀಡಾಂಗಣದಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 160ರಿಂದ 175.

08 ಸರಣಿ: ಭಾರತ-ಕಿವೀಸ್‌ ನಡುವೆ 8 ಬಾರಿ ಟಿ20 ಸರಣಿ ನಡೆದಿದೆ. ಭಾರತ 5ರಲ್ಲಿ, ನ್ಯೂಜಿಲೆಂಡ್‌ 3ರಲ್ಲಿ ಗೆದ್ದಿದೆ.

18 ಜಯ: ಭಾರತ ತಂಡ ಸೂರ್ಯಕುಮಾರ್‌ ನಾಯಕತ್ವದಲ್ಲಿ ಆಡಿದ 25 ಟಿ20 ಪೈಕಿ 18ರಲ್ಲಿ ಜಯಗಳಿಸಿದೆ.