ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪುಣೆ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ತಂಡವು 259 ರನ್‌ಗಳಿಗೆ ಸರ್ವಪತನ ಕಂಡಿದೆ. ವಾಷಿಂಗ್ಟನ್ ಸುಂದರ್ 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಪುಣೆ: ದೇಶಿ ಕ್ರಿಕೆಟ್‌ನಲ್ಲಿ ಮಿಂಚಿ ಟೀಂ ಇಂಡಿಯಾಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿರುವ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 7 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಅಯ್ದುಕೊಂಡ ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್‌ಗಳಿಗೆ ಸರ್ವಪತನ ಕಂಡಿದೆ. ಇನ್ನು ಮತ್ತೋರ್ವ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ತಂಡದ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರಂಭದಲ್ಲೇ ಭಾರತ ತಂಡವು ಟಾಮ್ ಲೇಥಮ್ ಬಲಿ ಪಡೆಯುವಲ್ಲಿ ಯಶಸ್ವಿಯಾಯಿತು. 8ನೇ ಓವರ್‌ನಲ್ಲೇ ರವಿಚಂದ್ರನ್ ಅಶ್ವಿನ್ ಅವರನ್ನು ದಾಳಿಗಿಳಿಸಿದ್ದ ರೋಹಿತ್ ತಂತ್ರಗಾರಿಕೆ ಫಲಕೊಟ್ಟಿತು. ಲೇಥಮ್ 15 ರನ್ ಗಳಿಸಿ ಅಶ್ವಿನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ವಿಲ್ ಯಂಗ್ ಕೂಡಾ 18 ರನ್ ಗಳಿಸಿ ಅಶ್ವಿನ್‌ಗೆ ಎರಡನೆ ಬಲಿಯಾದರು.
ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿದ ರಿಷಭ್ ಪಂತ್
ಇನ್ನು ಕಿವೀಸ್ ಪರ ಡೆವೊನ್ ಕಾನ್ವೇ ಆಕರ್ಷಕ 76 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಮತ್ತೊಮ್ಮೆ ಕಾಡಿದರು. ಆದರೆ ಈ ಸಂದರ್ಭದಲ್ಲಿ ಮತ್ತೆ ದಾಳಿಗಿಳಿದ ಅಶ್ವಿನ್, ಕಾನ್‌ವೇಯನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಬಲಿ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾದರು.
ಪುಣೆ ಟೆಸ್ಟ್: ಭಾರತ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ; ಭಾರತ ತಂಡದಲ್ಲಿ 3 ಮಹತ್ವದ ಬದಲಾವಣೆ
ಮೋಡಿ ಮಾಡಿದ ವಾಷಿಂಗ್ಟನ್ ಸುಂದರ್: ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಅಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿ ಆಯ್ಕೆಗಾರರ ಗಮನ ಸೆಳೆದಿದ್ದ ವಾಷಿಂಗ್ಟನ್ ಸುಂದರ್, ಇದೀಗ ಕಮ್‌ಬ್ಯಾಕ್ ಪಂದ್ಯದಲ್ಲೇ 7 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ. ಕಿವೀಸ್ ಪರ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ರಚಿನ್ ರವೀಂದ್ರ(65) ಸೇರಿದಂತೆ 7 ಆಟಗಾರರನ್ನು ಬಲಿ ಪಡೆಯುವ ಮೂಲಕ ಸುಂದರ್, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವಾಷಿಂಗ್ಟನ್ ಸುಂದರ್, ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ 5+ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. 23.1 ಓವರ್‌ನಲ್ಲಿ 4 ಮೇಡನ್ ಸಹಿತ 59 ರನ್ ನೀಡಿ 7 ವಿಕೆಟ್ ಕಬಳಿಸುವಲ್ಲಿ ಸುಂದರ್ ಯಶಸ್ವಿಯಾದರು.
