ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದ ಟಿಕೆಟ್‌ಗಳು ಕೇವಲ 8 ನಿಮಿಷಗಳಲ್ಲಿ ಸೋಲ್ಡ್‌ ಔಟ್‌ ಆಗಿವೆ. ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಆಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜ.11ರಂದು ಬರೋಡಾದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್‌ಗಳನ್ನು ಗುರುವಾರ ಆನ್‌ಲೈನ್‌ನಲ್ಲಿ ಮಾರಾಟಕ್ಕಿಡಲಾಗಿತ್ತು. ಕೇವಲ 8 ನಿಮಿಷಗಳಲ್ಲಿ ಟಿಕೆಟ್‌ ಸೋಲ್ಡ್‌ ಔಟ್‌ ಆಯಿತು ಎಂದು ತಿಳಿದುಬಂದಿದೆ.

ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಆಟ ನೋಡಲು ಅಭಿಮಾನಿಗಳು ಉತ್ಸುಕಗೊಂಡಿದ್ದು, ಏಕದಿನ ಸರಣಿಯ ಮೂರೂ ಪಂದ್ಯಗಳಿಗೆ ಕ್ರೀಡಾಂಗಣ ಭರ್ತಿಯಾಗುವ ನಿರೀಕ್ಷೆ ಇದೆ. ಸದ್ಯ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದರೇ, ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರು ದಿಗ್ಗಜ ಕ್ರಿಕೆಟಿಗರು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಕಳೆದೆರಡು ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು.

ವಿಜಯ್ ಹಜಾರೆ ಟೂರ್ನಿಯಲ್ಲೂ ಅಬ್ಬರಿಸಿರುವ ರೋ-ಕೋ ಜೋಡಿ

ಕೊಹ್ಲಿ ಹಾಗೂ ರೋಹಿತ್‌ ಇಬ್ಬರೂ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ತಲಾ 2 ಪಂದ್ಯಗಳನ್ನಾಡಿದ್ದಾರೆ. ಕೊಹ್ಲಿ ಎರಡೂ ಪಂದ್ಯಗಳಲ್ಲಿ ಅಬ್ಬರಿಸಿದರೆ, ರೋಹಿತ್‌ ಒಂದು ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಕೊಹ್ಲಿ ಆಟ ನೋಡಲು ಬೆಂಗಳೂರಲ್ಲಿ ಅಭಿಮಾನಿಗಳಿಗೆ ಅವಕಾಶ ಸಿಗಲಿಲ್ಲ. ಆದರೆ, ಜೈಪುರದಲ್ಲಿ ರೋಹಿತ್‌ರ ಆಟ ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ಕೊಹ್ಲಿ ಹಾಗೂ ರೋಹಿತ್‌ ಭಾರತ ಪರ ಕೇವಲ ಏಕದಿನ ಮಾದರಿಯನ್ನಷ್ಟೇ ಆಡುತ್ತಿದ್ದು, 2027ರ ವಿಶ್ವಕಪ್‌ಗೆ ಅವರು ತಂಡದಲ್ಲಿ ಇರಬೇಕು ಎನ್ನುವುದು ಅಭಿಮಾನಿಗಳು ಹಾಗೂ ಹಲವು ಕ್ರಿಕೆಟ್‌ ತಜ್ಞರ ವಾದವಾಗಿದೆ. ಆದರೆ, ಬಿಸಿಸಿಐ ಆಯ್ಕೆ ಸಮಿತಿ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸದ್ಯ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಈ ಇಬ್ಬರ ಪ್ರದರ್ಶನವನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ಆದರೆ ವಿರಾಟ್ ಹಾಗೂ ರೋಹಿತ್ ಶರ್ಮಾ 2027ರ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿರುವುದು ಅವರ ಪ್ರದರ್ಶನದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಶೂನ್ಯ ಸುತ್ತಿದರು ಆ ಬಳಿಕ ಆಡಿದ ಕೊನೆಯ ಏಕದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ನಂತರ ದಕ್ಷಿಣ ಆಫ್ರಿಕಾ ಎದುರು ಸತತ ಎರಡು ಶತಕ ಹಾಗೂ ಅರ್ಧಶತಕಗಳ ನೆರವಿಂದ ಭರ್ಜರಿ ಫಾರ್ಮ್‌ಗೆ ಮರಳಿದ್ದು, ಇದೀಗ ಕಿವೀಸ್ ಎದುರು ತಮ್ಮ ಬ್ಯಾಟಿಂಗ್ ಲಯ ಮುಂದುವರೆಸಿಕೊಂಡು ಹೋಗಲು ಸಜ್ಜಾಗಿದ್ದಾರೆ.