* ಐರ್ಲೆಂಡ್ ಎದುರು ಮೊದಲ ಟಿ20 ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ* ಗಾಯದ ಸಮಸ್ಯೆ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ ಭುವನೇಶ್ವರ್ ಕುಮಾರ್* ಬರೋಬ್ಬರಿ 201 ಕಿಲೋ ಮೀಟರ್​ ವೇಗದ ಬೌಲ್ ಮಾಡಿದ ಭುವಿ

ಬೆಂಗಳೂರು(ಜೂ.28): ಭುವನೇಶ್ವರ್ ಕುಮಾರ್​. ಟೀಂ ಇಂಡಿಯಾದ ಫಾಸ್ಟ್ ಬೌಲರ್. ವೇಗದ ಬೌಲರ್ ಅನ್ನೋದಕ್ಕಿಂತ ಸ್ವಿಂಗ್ ಬೌಲರ್ ಅಂದರೆ ಸೂಕ್ತ. ಈ ಸ್ವಿಂಗ್ ಮಾಸ್ಟರ್​​ಗೆ ಇಂಜುರಿ ಅನ್ನೋ ಭೂತ ಕಾಡದಿದ್ದರೆ ಅವರ ಖಾತೆಯಲ್ಲಿ ಇನ್ನಷ್ಟು ವಿಕೆಟ್​ಗಳು ಇರುತ್ತಿದ್ದವು. ಆದ್ರೆ ಗಾಯ ಅನ್ನೋ ಭೂತದಿಂದ ಭುವಿ ಅನೇಕ ದಿನಗಳು ಮೈದಾನಕ್ಕಿಂತ ಮನೆಯಲ್ಲಿ ಕಳೆದಿದ್ದೇ ಹೆಚ್ಚು. ಈಗ ಇದೇ ಭುವನೇಶ್ವರ್ ಎರಡು ವಿಷ್ಯದಲ್ಲಿ ಭಾರಿ ಸದ್ದು ಮಾಡ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಆ ಒಂದು ಓವರ್​ ಭುವಿಯನ್ನ ಇಂದು ಮತ್ತೆ ಫೇಮಸ್ ಮಾಡಿಸಿದೆ.

ಮೊನ್ನೆ ಭಾನುವಾರ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತು. ಭುವನೇಶ್ವರ್ ಕುಮಾರ್ (Bhuvneshwar Kumar) ಮೊದಲ ಓವರ್​ನಲ್ಲಿ ಬೌಲಿಂಗ್ ಮಾಡಿದ್ರು. ಐರ್ಲೆಂಡ್ ಓಪನರ್ ಪೌಲ್ ಸ್ಟೆರ್ಲಿಂಗ್​ಗೆ ಭುವಿ ಮೊದಲ ಚೆಂಡನ್ನು ಎದುರಿಸಿದರು. ಆ ಬಾಲ್ ವೇಗ ಎಷ್ಟು ಗೊತ್ತಾ..? ಬರೋಬ್ಬರಿ 201 ಕಿಲೋ ಮೀಟರ್​.

ನೀವು ನಂಬದಿದ್ದರೂ ಇದು ಸತ್ಯ. ಭುವನೇಶ್ವರ್ ಕುಮಾರ್ ಎಸೆದ ಮೊದಲ ಬಾಲ್ 201 ಕಿಲೋ ಮೀಟರ್ ವೇಗದ್ದು ಎಂದು ಪಂದ್ಯ ನೇರ ಪ್ರಸಾರದ ವೇಳೆ ತೋರಿಸಲಾಯ್ತು. ಚೆಂಡಿನ ವೇಗದ ಮಿತಿಯನ್ನು ತೋರಿಸುವ ಸ್ಪೀಡ್‌ ಗನ್‌ ಭುವಿ ಎಸೆದ ಮೊದಲ ಚೆಂಡಿನ ವೇಗವನ್ನು ಗಂಟೆಗೆ 201 ಕಿಲೋ ಮೀಟರ್ ಎಂದು ತೋರಿಸಿತು. ಆಗ ಎಲ್ಲರೂ ದಂಗಾದರು. ಇದು ಸ್ಪೀಡೋ ಮೀಟರ್​​ನಲ್ಲಿ ಕಂಡು ಬಂದ ದೋಷ ಎನ್ನುವುದರಲ್ಲಿ ಅನುಮಾನ ಬೇಡ. ಜಸ್ಟ್ ಸೆಕೆಂಡ್​ನಲ್ಲಿ ಅದನ್ನ ರಿಮೂವ್ ಸಹ ಮಾಡಲಾಯ್ತು. ಆದ್ರೆ ನೆಟ್ಟಿಗರು ಮಾತ್ರ ಈ ಅವಕಾಶವನ್ನು ಬಳಸಿಕೊಂಡು ಕೆಲವೊಂದು ಜೋಕ್‌ಗಳನ್ನು ಹರಿಬಿಟ್ಟರು. 

Ind vs IRE ನಿಜಕ್ಕೂ ಭುವನೇಶ್ವರ್ ಕುಮಾರ್ 200+ ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ರಾ..?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಎಸೆತ ಹಾಕಿರೋದು ಪಾಕಿಸ್ತಾನದ ಶೋಯೆಬ್ ಅಖ್ತರ್. 161.3 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್ ಮಾಡಿರುವ ಅಖ್ತರ್​ ಹೆಸರಿನಲ್ಲಿ ಈ ದಾಖಲೆ ಇದೆ. ಈ ರೆಕಾರ್ಡ್​ ಅನ್ನ ಭುವಿ ಬ್ರೇಕ್ ಮಾಡಿದ್ರಾ ಅನ್ನೋ ಟ್ರೋಲ್​ಗಳು ಓಡಾಡ್ತಿವೆ.

ಪವರ್​ ಪ್ಲೇನಲ್ಲಿ ಭುವಿ ಗರಿಷ್ಠ ವಿಕೆಟ್ ಟೇಕರ್: 

ಟಿ20 ಕ್ರಿಕೆಟ್​ನಲ್ಲಿ ಪವರ್ ಪ್ಲೇ ಅವಧಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸಾಧನೆಯನ್ನ ಭುವನೇಶ್ವರ್ ಕುಮಾರ್ ಮಾಡಿದ್ದಾರೆ. ಪವರ್ ಪ್ಲೇ ಟೈಮ್​ನಲ್ಲಿ ಭುವಿ 34 ವಿಕೆಟ್ ಪಡೆದಿದ್ದಾರೆ. ವೆಸ್ಟ್ ಇಂಡೀಸ್​ನ ಸ್ಯಾಮ್ಯುಯೆಲ್ ಬದ್ರಿ 33 ವಿಕೆಟ್ ಪಡೆದು ಟಾಪ್​ನಲ್ಲಿದ್ದರು. ಆದ್ರೆ ಐರ್ಲೆಂಡ್ ವಿರುದ್ಧದ ಮೊದಲ ಓವರ್​ನಲ್ಲಿ ನಾಯಕ ಆಂಡಿ ಬಲ್ಬಿರ್ನೆ ವಿಕೆಟ್ ಪಡೆದ ಭುವಿ, ನೂತನ ದಾಖಲೆ ನಿರ್ಮಿಸಿದ್ರು. ಈ ಎರಡು ವಿಷ್ಯದಿಂದಲೇ ಭುವನೇಶ್ವರ್ ಕುಮಾರ್ ನಿನ್ನೆಯಿಂದ ಸಖತ್ ಸುದ್ದಿಯಲ್ಲಿರೋದು.