ಚೆನ್ನೈ(ಜ.23): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ 2 ಟೆಸ್ಟ್‌ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಇಲ್ಲ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಆರ್.ಎಸ್.ರಾಮಸ್ವಾಮಿ ಶುಕ್ರವಾರ ತಿಳಿಸಿದ್ದಾರೆ. 

ಮೊದಲ 2 ಟೆಸ್ಟ್‌ಗಳಿಗೆ ಇಲ್ಲಿನ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಫೆ.5ರಿಂದ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. ‘ಬಿಸಿಸಿಐ ಸೂಚನೆಯಂತೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಆಟಗಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ’ ಎಂದು ರಾಮಸ್ವಾಮಿ ಹೇಳಿದ್ದಾರೆ. 

ಭಾರತಕ್ಕಿನ್ನು ಇಂಗ್ಲೆಂಡ್‌ ಚಾಲೆಂಜ್‌..!

ಜನವರಿ 27ರಂದು ತಂಡಗಳು ಚೆನ್ನೈಗೆ ತಲುಪಲಿದ್ದು, ಕೋವಿಡ್ ಪರೀಕ್ಷೆಗೆ ಒಳಗಾಗಲಿವೆ. ವರದಿ ನೆಗೆಟಿವ್ ಬಂದ ಮೇಲೆ ಬಯೋ ಬಬಲ್ ಪ್ರವೇಶಿಸಲಿವೆ ಎಂದು ರಾಮಸ್ವಾಮಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕ್ರೀಡಾಂಗಣಗಳಿಗೆ ಶೇ.50ರಷ್ಟು ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲು ಅನುಮತಿ ನೀಡಿತ್ತು. ಆದರೂ ಬಿಸಿಸಿಐ ಧೈರ್ಯ ಮಾಡಿಲ್ಲ.