ಬೆಂಗಳೂರು(ಜ.21): ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದು ಬೀಗುತ್ತಿರುವ ಭಾರತ ತಂಡಕ್ಕೆ ಇನ್ನೆರಡು ವಾರಗಳಲ್ಲಿ ಮತ್ತೊಂದು ಮಹತ್ವದ ಸವಾಲು ಎದುರಾಗಲಿದೆ. ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ 4 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿರುವ ಭಾರತ, ಈ ಸರಣಿಯನ್ನು ಗೆಲ್ಲಬೇಕಿದೆ.

ಪ್ರಮುಖ ಆಟಗಾರರು ಇಲ್ಲದೆಯೇ ಅಸ್ಪ್ರೇಲಿಯಾವನ್ನು ಅದರ ಗುಹೆಯಲ್ಲೇ ಹೊಸಕಿ ಹಾಕಿದ ಭಾರತ, ತನ್ನ ತವರಿನಲ್ಲಿ ಸುಲಭ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರೂ, ಎದುರಾಗಲಿರುವ ಸವಾಲು ಸುಲಭದ್ದಲ್ಲ ಎನ್ನುವುದು ತಂಡಕ್ಕೂ ಗೊತ್ತಿದೆ. ಇದೇ ಕಾರಣದಿಂದಾಗಿ ಪೂರ್ಣ ಬಲದ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.

ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌, ಇಶಾಂತ್‌ ಶರ್ಮಾ, ಆರ್‌.ಅಶ್ವಿನ್‌ ಹೀಗೆ ಆಸ್ಪ್ರೇಲಿಯಾ ವಿರುದ್ಧದ ಪಂದ್ಯಗಳಿಗೆ ಗೈರಾಗಿದ್ದ ಬಹುತೇಕ ಎಲ್ಲ ಹಿರಿಯ ಆಟಗಾರರು ತಂಡಕ್ಕೆ ಮರಳಿದ್ದಾರೆ. ಆಸ್ಪ್ರೇಲಿಯಾ ತನ್ನನ್ನು ಲಘುವಾಗಿ ಕಂಡಂತೆ, ತಾನು ಇಂಗ್ಲೆಂಡ್‌ ತಂಡವನ್ನು ಲಘುವಾಗಿ ಪರಿಗಣಿಸಿದರೆ ಸೋಲು ಖಚಿತ ಎನ್ನುವುದು ವಿರಾಟ್‌ ಕೊಹ್ಲಿ ಪಡೆಗೆ ತಿಳಿದಿದೆ. ಹೀಗಾಗಿ, ಸದ್ಯದಲ್ಲೇ ಭಾರತ ತಂಡ ಕಠಿಣ ಅಭ್ಯಾಸ ಆರಂಭಿಸಲಿದೆ.

ಆಸ್ಟ್ರೇಲಿಯಾ ಎದುರು ಭಾರತ ಹೀನಾಯವಾಗಿ ಸೋಲಲಿದೆ; ಟೀಕಾಕಾರರ ಬಾಯಿ ಮುಚ್ಚಿಸಿದ ಯಂಗಿಸ್ತಾನ್‌..!

ಇಂಗ್ಲೆಂಡ್‌ನ ಮಾಜಿ ಆಟಗಾರರು ಈಗಾಗಲೇ ಮೈಂಡ್‌ಗೇಮ್‌ಗಳನ್ನು ಆರಂಭಿಸಿದ್ದಾರೆ. ಆಸ್ಪ್ರೇಲಿಯಾದಲ್ಲಿ ಗೆದ್ದಂತೆ ಇಂಗ್ಲೆಂಡ್‌ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

ಇಂಗ್ಲೆಂಡ್‌ ಸರಣಿ ಭಾರತಕ್ಕೆ ಸವಾಲು ಏಕೆ?

* ಇಂಗ್ಲೆಂಡ್‌ ಈಗಾಗಲೇ ಲಂಕಾದಲ್ಲಿ ಸರಣಿ ಆಡುತ್ತಿದೆ. ಭಾರತೀಯ ಉಪಖಂಡದ ವಾತಾವರಣಕ್ಕೆ ಹೊಂದಿಕೊಂಡಿದೆ.

* ನಾಯಕ ಜೋ ರೂಟ್‌, ಬೇರ್‌ಸ್ಟೋವ್‌ ಸೇರಿ ಪ್ರಮುಖ ಆಟಗಾರರು ಉತ್ತಮ ಲಯದಲ್ಲಿದ್ದಾರೆ.

* ರೂಟ್‌, ಬೇರ್‌ಸ್ಟೋವ್‌, ಬಟ್ಲರ್‌, ಕರ್ರನ್‌, ಬ್ರಾಡ್‌ಗೆ ಭಾರತದಲ್ಲಿ ಆಡಿದ ಅನುಭವವಿದೆ.

* ಭಾರತೀಯ ಆಟಗಾರರು ಕಳೆದ 7 ತಿಂಗಳಿಂದ ನಿರಂತರವಾಗಿ ಕ್ರಿಕೆಟ್‌ ಆಡುತ್ತಿದ್ದು, ಗಾಯದ ಸಮಸ್ಯೆ ಹೆಚ್ಚುತ್ತಿದೆ.