* ಎರಡನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿ ವೇಳಾಪಟ್ಟಿ ಪ್ರಕಟ* 2021-2023ರ ಅವಧಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಖಚಿತ ಪಡಿಸಿದ ಐಸಿಸಿ* ಅಂಕಗಳ ಹಂಚಿಕೆಯಲ್ಲಿ ಮಹತ್ತರ ಬದಲಾವಣೆ ಮಾಡಿದ ಐಸಿಸಿ

ದುಬೈ(ಜು.14): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿಯಿಂದಲೇ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಖಚಿತಪಡಿಸಿದೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 04ರಿಂದ ಆರಂಭವಾಗಲಿದೆ.

ಇದೇ ವೇಳೆ 2021-2023ನೇ ಸಾಲಿನ ಎರಡನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಅಂಕಗಳ ಹಂಚಿಕೆಯ ವಿಚಾರವನ್ನು ಖಚಿತಪಡಿಸಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಪ್ರತಿ ಪಂದ್ಯಕ್ಕೂ 12 ಅಂಕಗಳನ್ನು ನಿಗದಿಪಡಿಸಲಾಗಿದೆ. ಟೆಸ್ಟ್ ಗೆಲುವು ದಾಖಲಿಸಿದ ತಂಡ 12 ಅಂಕ ಪಡೆಯಲಿದೆ, ಪಂದ್ಯ ಡ್ರಾ ಆದರೆ 4 ಅಂಕ, ಟೈ ಆದರೆ ಉಭಯ ತಂಡಗಳು ತಲಾ 8 ಅಂಕಗಳನ್ನು ಪಡೆಯಲಿವೆ ಎಂದು ಐಸಿಸಿ ತಿಳಿಸಿದೆ.

Scroll to load tweet…

ಮೊದಲ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿನ ಗೊಂದಲಗಳ ಕುರಿತಂತೆ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಫಲಿತಾಂಶದ ಅಂಕಗಳನ್ನು ಸರಳೀಕರಿಸಲಾಗಿದೆ. ಕೋವಿಡ್ 19 ಕಾರಣದಿಂದಾಗಿ ಕಳೆದ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಕೆಲವು ಪಂದ್ಯಗಳು ರದ್ದಾಗಿದ್ದವು, ಶೇಕಡವಾರು ಆಧಾರದಲ್ಲಿ ಅಂಕಗಳ ಹಂಚಿಕೆ ಮಾಡಲಾಗಿತ್ತು. ಇದೀಗ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಅಂಕಗಳ ಹಂಚಿಕೆಯನ್ನು ಸರಳೀಕರಿಸಲಾಗಿದೆ ಎಂದು ಐಸಿಸಿ ಹಂಗಾಮಿ ಕಾರ್ಯನಿರ್ವಾಹಕಾಧಿಕಾರಿ ಜೆಫ್‌ ಅಲ್ಲಾರ್ಡೈಸ್ ತಿಳಿಸಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯಂತೆ ಈ ಬಾರಿಯೂ 9 ತಂಡಗಳು ತಲಾ 6 ಸರಣಿಗಳನ್ನು ಆಡಲಿದ್ದು, ಮೂರು ಸರಣಿಗಳು ತವರಿನಲ್ಲಿ ಹಾಗೂ ಮತ್ತೆ ಮೂರು ಸರಣಿಗಳು ತವರಿನಾಚೆ ಆಡಲಿವೆ. ಮಾರ್ಚ್‌ 31, 2023ರ ವೇಳೆಗೆ ಗರಿಷ್ಠ ಅಂಕ ಗಳಿಸುವ ಎರಡು ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ ಮೇಸ್‌ಗಾಗಿ ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

ಎರಡನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ದ ಕಾದಾಡಿದರೆ, ತವರಿನಾಚೆ ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಸೆಣಸಲಿದೆ.

Scroll to load tweet…