ಪುಣೆ(ಮಾ.22): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್ ಹಾಗೂ ಟಿ20 ಸರಣಿ ಮುಕ್ತಾಯವಾಗಿದ್ದು, ಇದೀಗ ಏಕದಿನ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 3 ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ಮಾರ್ಚ್‌ 23ರಿಂದ ಪುಣೆಯಲ್ಲಿ ಏಕದಿನ ಸರಣಿ ಆರಂಭವಾಗಲಿದೆ.

ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರವಾಸಿ ಇಂಗ್ಲೆಂಡ್‌ ವಿರುದ್ದ ಮೇಲುಗೈ ಸಾಧಿಸಿದ್ದು, ಟೆಸ್ಟ್ ಸರಣಿಯನ್ನು ಭಾರತ 3-1 ಅಂತರದಲ್ಲಿ ಜಯಿಸಿದರೆ, ಟಿ20 ಸರಣಿಯನ್ನು 3-2 ಅಂತರದಲ್ಲಿ ಕೈವಶ ಮಾಡಿಕೊಂಡು ಬೀಗಿದೆ. ಇದೀಗ ಹಾಲಿ ವಿಶ್ವಚಾಂಪಿಯನ್ನರ ಮೇಲೆ ಏಕದಿನ ಸರಣಿಯಲ್ಲೂ ಪ್ರಾಬಲ್ಯ ಮೆರೆಯಲು ವಿರಾಟ್ ಕೊಹ್ಲಿ ಪಡೆ ಎದುರು ನೋಡುತ್ತಿದೆ. ಭಾರತದಲ್ಲಿ 2016-17ರಲ್ಲಿ ಉಭಯ ತಂಡಗಳು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಭಾರತ ತಂಡ 2-1 ಅಂತರದಲ್ಲಿ ಏಕದಿನ ಸರಣಿ ಜಯಿಸಿತ್ತು.

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಭರ್ಜರಿ ಸಿದ್ದತೆ; ಹಲವು ಪ್ರಯೋಗ ಸಕ್ಸಸ್

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಮೊದಲ ಏಕದಿನ ಪಂದ್ಯ ಮಾರ್ಚ್ 23ರಂದು ನಡೆದರೆ, ಎರಡನೇ ಏಕದಿನ ಪಂದ್ಯ ಮಾರ್ಚ್ 26 ಹಾಗೂ ಮೂರನೇ ಏಕದಿನ ಪಂದ್ಯ ಮಾರ್ಚ್ 29ರಂದು ನಡೆಯಲಿದೆ. 

ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ ನೋಡಿ:
* ಭಾರತ-ಇಂಗ್ಲೆಂಡ್‌ ಮೊದಲ ಏಕದಿನ ಪಂದ್ಯ: ಮಾರ್ಚ್‌ 23, ಸಮಯ: ಮಧ್ಯಾಹ್ನ 1:30
* ಭಾರತ-ಇಂಗ್ಲೆಂಡ್‌ ಎರಡನೇ ಏಕದಿನ ಪಂದ್ಯ: ಮಾರ್ಚ್‌ 26, ಸಮಯ: ಮಧ್ಯಾಹ್ನ 1:30
* ಭಾರತ-ಇಂಗ್ಲೆಂಡ್‌ ಮೂರನೇ ಏಕದಿನ ಪಂದ್ಯ: ಮಾರ್ಚ್‌ 28, ಸಮಯ: ಮಧ್ಯಾಹ್ನ 1:30

ಪಂದ್ಯ ಎಲ್ಲಿ ವೀಕ್ಷಿಸಬಹುದು..?
ಕೊರೋನಾ ಕಾರಣದಿಂದಾಗಿ ಖಾಲಿ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಏಕದಿನ ಸರಣಿ ನಡೆಯಲಿದೆ. ಹೀಗಾಗಿ ಕ್ರಿಕೆಟ್‌ ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು. ಇನ್ನು ಡಿಸ್ನಿ+ಹಾಟ್‌ಸ್ಟಾರ್‌ನಲ್ಲೂ ಈ ಪಂದ್ಯವಳಿಗಳನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.