Asianet Suvarna News Asianet Suvarna News

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಭರ್ಜರಿ ಸಿದ್ದತೆ; ಹಲವು ಪ್ರಯೋಗ ಸಕ್ಸಸ್

ಇಂಗ್ಲೆಂಡ್ ವಿರುದ್ದದ ಟಿ20 ಸರಣಿ ಭಾರತದ ಪಾಲಿಗೆ ಮುಂಬರುವ ಟಿ20 ವಿಶ್ವಕಪ್‌ಗೆ ಒಳ್ಳೆಯ ತಯಾರಿ ಎಂದು ಹೇಳಲಾಗುತ್ತಿದ್ದು, ಸಾಕಷ್ಟು ಧನಾತ್ಮಕ ಅಂಶಗಳು ಟೀಂ ಇಂಡಿಯಾಗೆ ಸಿಕ್ಕಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Ind vs Eng T20 series win bears template of Team India T20 World Cup plans kvn
Author
Ahmedabad, First Published Mar 22, 2021, 12:41 PM IST

ಅಹಮದಾಬಾದ್(ಮಾ.22)‌: ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಇನ್ನೇನು 7 ತಿಂಗಳಲ್ಲಿ ತವರಿನಲ್ಲೇ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಭಾರತ ತಂಡ ಸರ್ಮಪಕವಾಗಿ ಬಳಸಿಕೊಂಡಿದೆ. ಸರಣಿಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ ಭಾರತ, ತನ್ನ ವಿಶ್ವಕಪ್‌ ಯೋಜನೆ ಗುಟ್ಟನ್ನು ಸಾಧ್ಯವಾದಷ್ಟು ಬಹಿರಂಗಪಡಿಸದೆ ಇರುವುದು ವಿಶೇಷ. ಈ ಸರಣಿಯಲ್ಲಿ ಕೆಲ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಿದೆ. ಅಲ್ಲದೇ ತನ್ನಲ್ಲಿದ್ದ ಕೆಲ ಪ್ರಶ್ನೆಗಳಿಗೆ ತಂಡದ ಆಡಳಿತ ಉತ್ತರ ಕಂಡುಕೊಂಡಿದೆ.

ಆರಂಭಿಕರ ಸ್ಥಾನಕ್ಕೆ ಹಲವು ಆಯ್ಕೆ: ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಭಾರತ 4 ಬಾರಿ ಆರಂಭಿಕ ಜೋಡಿಯನ್ನು ಬದಲಿಸಿತು. ಮೊದಲ ಪಂದ್ಯದಲ್ಲಿ ಧವನ್‌ ಹಾಗೂ ರಾಹುಲ್‌, 2ನೇ ಪಂದ್ಯದಲ್ಲಿ ರಾಹುಲ್‌-ಇಶಾನ್‌ ಕಿಶನ್‌, 3ನೇ ಹಾಗೂ 4ನೇ ಪಂದ್ಯದಲ್ಲಿ ರೋಹಿತ್‌-ರಾಹುಲ್‌, 5ನೇ ಪಂದ್ಯದಲ್ಲಿ ರೋಹಿತ್‌ ಹಾಗೂ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದರು. ನಾಯಕ ಹಾಗೂ ಉಪನಾಯಕ ಆರಂಭಿಕರಾಗಿ ಆಡಿದ್ದೇ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂತು.

ಬಲಿಷ್ಠ ಮಧ್ಯಮ ಕ್ರಮಾಂಕ: ಸೂರ್ಯಕುಮಾರ್‌ ಯಾದವ್‌ ಹಾಗೂ ಇಶಾನ್‌ ಕಿಶನ್‌ ಸೇರ್ಪಡೆ ತಂಡದ ಮಧ್ಯಮ ಕ್ರಮಾಂಕ ಬಲಿಷ್ಠಗೊಳಿಸಿದೆ. ಇಬ್ಬರಲ್ಲಿ ಒಬ್ಬರು 3ನೇ ಕ್ರಮಾಂಕದಲ್ಲಿ ಆಡಬಹುದು. ಇಲ್ಲವೇ ಕಿಶನ್‌ ಆರಂಭಿಕನಾಗಿಯೂ ಯಶಸ್ಸು ಕಂಡಿದ್ದಾರೆ. 4ನೇ ಕ್ರಮಾಂಕಕ್ಕೆ ರಿಷಭ್‌ ಪಂತ್‌, 5ನೇ ಕ್ರಮಾಂಕಕ್ಕೆ ಶ್ರೇಯಸ್‌ ಅಯ್ಯರ್‌, 6ನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಆಡುವುದು ಹೆಚ್ಚು ಸೂಕ್ತ ಎನಿಸಿದೆ. ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಡಿಸುವಾಗ ಕಿಶನ್‌ ಹಾಗೂ ಸೂರ್ಯ ಇಬ್ಬರೂ ಆಡಬಹುದು.

ಭಾರತ ವಿರುದ್ದದ ಏಕದಿನ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ

ಆಲ್ರೌಂಡರ್‌ಗಳ ಬಲ: ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡಲು ಫಿಟ್‌ ಆಗಿರುವುದು ತಂಡ ಸಮತೋಲನ ಕಂಡುಕೊಳ್ಳಲು ಅನುಕೂಲವಾಗಿದೆ. ರವೀಂದ್ರ ಜಡೇಜಾ ವಾಪಸಾದ ಮೇಲೆ ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ವಾಷಿಂಗ್ಟನ್‌ ಸುಂದರ್‌ರನ್ನು ಉದ್ದೇಶಪೂರ್ವಕವಾಗಿಯೇ ಪವರ್‌-ಪ್ಲೇನಲ್ಲಿ ಬೌಲ್‌ ಮಾಡುವುದನ್ನು ತಡೆಯಲಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸದೃಢ ಬೌಲಿಂಗ್‌ ಪಡೆ: ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ ಅನುಪಸ್ಥಿತಿಯಲ್ಲೂ ಭಾರತ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿತು. ಅನುಭವಿ ಭುವನೇಶ್ವರ್‌ ಕುಮಾರ್‌, ಯುವ ವೇಗಿಗಳಾದ ಶಾರ್ದೂಲ್‌ ಠಾಕೂರ್‌, ಟಿ.ನಟರಾಜನ್‌ ಸಹ ಗಮನ ಸೆಳೆದಿದ್ದಾರೆ. ಭಾರತಕ್ಕೆ ಇನ್ನೂ ಕೆಲ ಆಯ್ಕೆಗಳಿಗೆ. ಐಪಿಎಲ್‌ನಲ್ಲಿ ಮತ್ತಷ್ಟು ವೇಗದ ಬೌಲರ್‌ಗಳನ್ನು ಭಾರತ ತಂಡದ ಆಡಳಿತ ಗುರುತಿಸಲಿದೆ. ಸ್ಪಿನ್ನರ್‌ ಯಜುವೇಂದ್ರ ಚಹಲ್‌ ದುಬಾರಿಯಾದರೂ, ಅವರೇ ತಂಡದ ಟ್ರಂಪ್‌ಕಾರ್ಡ್‌. ವಾಷಿಂಗ್ಟನ್‌, ರಾಹುಲ್‌ ಚಹರ್‌, ರಾಹುಲ್‌ ತೆವಾಟಿಯಾ ಹೀಗೆ ಹಲವು ಆಯ್ಕೆಗಳು ತಂಡದ ಮುಂದಿದೆ.

ಶನಿವಾರದ 5ನೇ ಹಾಗೂ ಅಂತಿಮ ಪಂದ್ಯ ವಿಶ್ವಕಪ್‌ ಫೈನಲ್‌ನ ರಿಹರ್ಸಲ್‌ ಇದ್ದ ಹಾಗೆ ಎಂದು ಅನೇಕ ಮಾಜಿ ಕ್ರಿಕೆಟಿಗರು, ಕ್ರಿಕೆಟ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ವಿಶ್ವಕಪ್‌ ಫೈನಲ್‌ಗೇರುವ ನೆಚ್ಚಿನ ತಂಡಗಳೆನಿಸಿದ್ದು, ಎರಡೂ ತಂಡಗಳ ತಯಾರಿ ನಡೆಸುತ್ತಿರುವ ರೀತಿ ಕ್ರಿಕೆಟ್‌ ಅಭಿಮಾನಿಗಳಲ್ಲಿ ಆಸಕ್ತಿ ಮೂಡಿಸಿರುವುದು ಸುಳ್ಳಲ್ಲ.
 

Follow Us:
Download App:
  • android
  • ios