ಚೆನ್ನೈ ಟೆಸ್ಟ್: ಶತಕದತ್ತ ರೋಹಿತ್ ದಾಪುಗಾಲು
ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, ರೋಹಿತ್ ಶರ್ಮಾ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.13): ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಲಯಕ್ಕೆ ಮರಳಿದ್ದು, ಸೀಮಿತ ಓವರ್‌ಗಳ ಕ್ರಿಕೆಟ್‌ನಂತೆ ಬ್ಯಾಟ್ ಬೀಸುತ್ತಿದ್ದಾರೆ. ಲಂಚ್ ಬ್ರೇಕ್ ವೇಳೆಗೆ ರೋಹಿತ್ ಶರ್ಮಾ 78 ಎಸೆತಗಳನ್ನು ಎದುರಿಸಿ ಅಜೇಯ 80 ರನ್ ಬಾರಿಸಿದ್ದು ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 106 ರನ್ ಬಾರಿಸಿದೆ.
ಹೌದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಟೀಂ ಇಂಡಿಯಾ ತನ್ನ ಖಾತೆ ತೆರೆಯುವಷ್ಟರಲ್ಲೇ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಜತೆ ಎಚ್ಚರಿಕೆಯ ಜತೆಯಾಟ ನಿಭಾಯಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 85 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿತು.
ಅದರಲ್ಲೂ ಸೀಮಿತ ಓವರ್‌ಗಳ ಕ್ರಿಕೆಟ್‌ನಂತೆ ಬ್ಯಾಟ್ ಬೀಸಿದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೇವಲ 47 ಎಸೆತಗಳಲ್ಲಿ ವೃತ್ತಿಜೀವನದ 12ನೇ ಟೆಸ್ಟ್ ಅರ್ಧಶತಕ ಪೂರೈಸಿದರು. ಸದ್ಯ ರೋಹಿತ್ ಶರ್ಮಾ78 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 80 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ. ರೋಹಿತ್‌ಗೆ ಉತ್ತಮ ಸಾಥ್ ನೀಡಿದ ಪೂಜಾರ 58 ಎಸೆತಗಳನ್ನು ಎದುರಿಸಿ 21 ರನ್ ಬಾರಿಸಿದರು.
2ನೇ ಚೆನ್ನೈ ಟೆಸ್ಟ್: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ
ಒಂದು ರನ್ ಅಂತರದಲ್ಲಿ 2 ವಿಕೆಟ್: ಆರಂಭಿಕ ಆಘಾತದ ಹೊರತಾಗಿಯೂ ಪೂಜಾರ ಹಾಗೂ ರೋಹಿತ್ ಉತ್ತಮ ಜತೆಯಾಟದ ಹೊರತಾಗಿಯೂ ಕೇವಲ 1 ರನ್ ಅಂತರದಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಪೂಜಾರ ಅವರನ್ನು ಜಾಕ್ ಲೀಗ್ ಬಲಿ ಪಡೆದರೆ, ನಾಯಕ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಪೆವಿಲಿಯನ್ ಸೇರುವಂತೆ ಮಾಡುವಲ್ಲಿ ಆರ್‌ಸಿಬಿ ಮಾಜಿ ಕ್ರಿಕೆಟಿಗ ಮೋಯಿನ್ ಅಲಿ ಯಶಸ್ವಿಯಾದರು.