ಕಟಕ್‌ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಕುಲ್ದೀಪ್‌ಗೆ ವಿಶ್ರಾಂತಿ ನೀಡಿ ವರುಣ್ ಚಕ್ರವರ್ತಿಗೆ ಪಾದಾರ್ಪಣೆ ಅವಕಾಶ. ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆಯಲ್ಲಿ ಉತ್ತಮ ಲಯ ಕಂಡುಕೊಳ್ಳುವತ್ತ ಭಾರತದ ನಿರೀಕ್ಷೆ.
ಕಟಕ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಸೊಲು ಅನುಭವಿಸಿರುವ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಇಲ್ಲಿನ ಬಾರಮತಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಇನ್ನು ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗಿದೆ. ಮಂಡಿನೋವಿನ ಸಮಸ್ಯೆಯಿಂದಾಗಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಸಂಪೂರ್ಣ ಫಿಟ್ ಆಗಿದ್ದು ಆಡುವ ಹನ್ನೊಂದರ ಬಳಗ ಕೂಡಿಕೊಂಡಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಂಡದಲ್ಲಿ ವಿರಾಟ್‌ಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಇನ್ನು ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದ್ದು, ಚೆನ್ನೈ ಮೂಲದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇದೀಗ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ವರುಣ್ ಚಕ್ರವರ್ತಿ, ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಇಂಗ್ಲೆಂಡ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ಮಾರ್ಕ್ ವುಡ್, ಗುಸ್ ಅಟ್ಕಿನ್‌ಸನ್ ಹಾಗೂ ಜೇಮಿ ಓವರ್‌ಟನ್ ತಂಡ ಕೂಡಿಕೊಂಡಿದ್ದಾರೆ.
ಇನ್ನು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯುತ್ತಿರುವ ಮಹತ್ವದ ಸರಣಿ ಇದಾಗಿರುವುದರಿಂದ ಲಯ ಕಂಡುಕೊಳ್ಳಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎದುರು ನೋಡುತ್ತಿದ್ದಾರೆ. ಇದರ ಜತೆಗೆ ವರುಣ್ ಚಕ್ರವರ್ತಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಕಡೆಯ ಕ್ಷಣದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಸೇರಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ತಂಡಗಳು ಹೀಗಿವೆ ನೋಡಿ
ಭಾರತ
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ , ಹರ್ಷಿತ್ ರಾಣಾ
ಇಂಗ್ಲೆಂಡ್
ಫಿಲ್ ಸಾಲ್ಟ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮಾರ್ಕ್ ವುಡ್, ಗುಸ್ ಅಟ್ಕಿನ್‌ಸನ್, ಜೇಮಿ ಓವರ್‌ಟನ್, ಸಾಕಿಬ್ ಮೊಹಮದ್, ಆದಿಲ್ ರಶೀದ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಹಾಟ್‌ಸ್ಟಾರ್.
