ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ-ಭಾರತ ಫೈಟ್ಜೂನ್ 07ರಿಂ ಲಂಡನ್‌ನ ದಿ ಓವಲ್ ಮೈದಾನದಲ್ಲಿ ಪಂದ್ಯಈ ಪಂದ್ಯದ ಭವಿಷ್ಯ ನುಡಿದ ರಿಕಿ ಪಾಂಟಿಂಗ್

ನವದೆಹಲಿ(ಮೇ.20): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವು ಜೂನ್ 07ರಿಂದ ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್‌ ಟೆಸ್ಟ್ ವಿಶ್ವಕಪ್ ಫೈನಲ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೆಲ್ಲದರ ನಡುವೆ ಈ ಟೆಸ್ಟ್ ಫೈನಲ್‌ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್‌ಕೋಚ್ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ಓವೆಲ್‌ ಮೈದಾನವು ಕೊಂಚ ಮಟ್ಟಿಗೆ ಆಸ್ಟ್ರೇಲಿಯಾದ ವಾತಾವರಣವನ್ನು ಹೋಲುವಂತಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತಕ್ಕಿಂತ ಆಸ್ಟ್ರೇಲಿಯಾಗೆ ಸ್ವಲ್ಪ ಹೆಚ್ಚಿನ ನೆರವಾಗುವ ಸಾಧ್ಯತೆಯಿದೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. "ಭಾರತದ ವಿಕೆಟ್‌ಗಳಿಗೆ ಹೋಲಿಸಿದರೆ, ದಿ ಓವಲ್ ಪಿಚ್‌ ಕೊಂಚ ಮಟ್ಟಿಗೆ ಆಸ್ಟ್ರೇಲಿಯಾದ ವಿಕೆಟ್‌ಗಳಿಗೆ ಹೋಲುವಂತಿದೆ. ಹೀಗಾಗಿ ಆಸ್ಟ್ರೇಲಿಯಾಗೆ ಇದು ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳಲು ಬಯಸುತ್ತೇನೆ. ಒಂದು ವೇಳೆ ಟೆಸ್ಟ್ ವಿಶ್ವಕಪ್ ಭಾರತದಲ್ಲೇ ನಡೆದಿದ್ದರೇ, ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲಲು ಸಾಕಷ್ಟು ಕಷ್ಟಪಡಬೇಕಿತ್ತು. ಅದೇ ರೀತಿ ಒಂದು ವೇಳೆ ಈ ಫೈನಲ್ ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಂಡಿದ್ದರೇ, ಆಸ್ಟ್ರೇಲಿಯಾವೂ ಚಾಂಪಿಯನ್ ಪಟ್ಟ ಅಲಂಕರಿಸಬಲ್ಲ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿತ್ತು. ಆದರೆ ಈ ಟೆಸ್ಟ್ ವಿಶ್ವಕಪ್‌ ಫೈನಲ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವುದರಿಂದಾಗಿ ಎರಡೂ ತಂಡಗಳು ಸಮಬಲದ ಹೋರಾಟ ನೀಡುವ ಸಾಧ್ಯತೆಯಿದೆ ಎಂದು ರಿಕಿ ಪಾಂಟಿಂಗ್, ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. 

ಇತ್ತೀಚಿಗಿನ ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ಮಾತ್ರವಲ್ಲದೇ ವಿದೇಶಿ ನೆಲಗಳಲ್ಲಿಯೂ ದಿಟ್ಟ ಪ್ರದರ್ಶನವನ್ನು ನೀಡುತ್ತಾ ಬಂದಿದೆ. 2021-22ರಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತ್ತು. ಇದಷ್ಟೇ ಅಲ್ಲದೇ ಇಂಗ್ಲೆಂಡ್ ಪ್ರವಾಸದಲ್ಲಿ 2-2ರ ಸಮಬಲ ಸಾಧಿಸಿತ್ತು. ಇದೀಗ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

WTC Final ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಕೂಕಾಬುರಾ ಚೆಂಡು!

ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಈಗಾಗಲೇ ಇಂಗ್ಲೆಂಡ್‌ನಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಚೇತೇಶ್ವರ್ ಪೂಜಾರ ಸದ್ಯ ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದಾರೆ. ಸಸೆಕ್ಸ್ ಪರ ಚೇತೇಶ್ವರ್ ಪೂಜಾರ 7 ಪಂದ್ಯಗಳನ್ನಾಡಿ 3 ಶತಕ ಹಾಗೂ ಒಂದು ಅರ್ಧಶತಕ ಸಹಿತ 77.85ರ ಬ್ಯಾಟಿಂಗ್ ಸರಾಸರಿಯಲ್ಲಿ 545 ರನ್ ಬಾರಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಆಸ್ಟ್ರೇಲಿಯಾ ಎದುರು ಚೇತೇಶ್ವರ್ ಪೂಜಾರ ಮಿಂಚುವ ಸಾಧ್ಯತೆಯಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್‌, ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.

ಮೀಸಲು ಆಟಗಾರರು: ಋುತು​ರಾಜ್‌ ಗಾಯ​ಕ್ವಾಡ್‌, ಸೂರ್ಯಕು​ಮಾರ್‌ ಯಾದವ್, ವೇಗಿ ಮುಕೇಶ್‌ ಕುಮಾರ್‌ 

ಆಸ್ಟ್ರೇಲಿಯಾ ಕ್ರಿಕೆಟ್ ತಂಡ:

ಪ್ಯಾಟ್ ಕಮಿನ್ಸ್‌(ನಾಯಕ), ಡೇವಿಡ್ ವಾರ್ನರ್‌, ಉಸ್ಮಾನ್ ಖವಾಜ, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್‌, ಮಾರ್ನಸ್ ಲಬುಶೇನ್‌, ಸ್ಟೀವ್ ಸ್ಮಿತ್‌, ಟ್ರಾವಿಸ್ ಹೆಡ್‌, ಕ್ಯಾಮರೋನ್ ಗ್ರೀನ್‌, ಮಿಚೆಲ್‌ ಮಾರ್ಷ್‌, ಅಲೆಕ್ಸ್‌ ಕೇರ್ರಿ, ಜೋಶ್ ಇಂಗ್ಲಿಸ್‌, ಮಿಚೆಲ್ ಸ್ಟಾರ್ಕ್, ಜೋಸ್ ಹೇಜಲ್‌ವುಡ್‌, ಸ್ಕಾಟ್‌ ಬೋಲೆಂಡ್‌, ನೇಥನ್ ಲಯನ್‌, ಟೋಡ್ ಮರ್ಫಿ.