ಸಿಡ್ನಿ(ಜ.08): ಯುವ ಬ್ಯಾಟ್ಸ್‌ಮನ್ ಶುಭ್‌ಮನ್‌ ಗಿಲ್‌ ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ ತಿರುಗೇಟು ನೀಡುವಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಎರಡನೇ ದಿನದಾಟದಂತ್ಯಕ್ಕೇ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 96 ರನ್‌ ಬಾರಿಸಿದ್ದು, ಇನ್ನೂ 242 ರನ್‌ಗಳ ಹಿನ್ನಡೆಯಲ್ಲಿದೆ

ಹೌದು, ಆಸ್ಟ್ರೇಲಿಯಾ ತಂಡವನ್ನು 338 ರನ್‌ಗಳಿಗೆ ಆಲೌಟ್‌ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಬಾರ್ಡರ್‌-ಗವಾಸ್ಕರ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ತಂಡ ಕೂಡಿಕೊಂಡ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್‌ ಮೊದಲ ವಿಕೆಟ್‌ಗೆ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರೋಹಿತ್ ಶರ್ಮಾ 77 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 26 ರನ್‌ ಬಾರಿಸಿ ಹೇಜಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರು.

ಚೊಚ್ಚಲ ಅರ್ಧಶತಕ ಬಾರಿಸಿದ ಗಿಲ್‌: ಇನ್ನು ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶುಭ್‌ಮನ್‌ ಗಿಲ್‌ ಆಕರ್ಷಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. ಆಸ್ಟ್ರೇಲಿಯಾ ಮಾರಕ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ ಗಿಲ್‌ 101 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 50 ರನ್‌ ಬಾರಿಸಿ ಪ್ಯಾಟ್‌ ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಗಿಲ್ ಈ ಅರ್ಧಶತಕ ಬಾರಿಸುವುದರೊಂದಿಗೆ ಏಷ್ಯಾದಾಚೆಗೆ 50+ ರನ್ ಬಾರಿಸಿದ ನಾಲ್ಕನೇ ಕಿರಿಯ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಸಿಡ್ನಿ ಟೆಸ್ಟ್: ಜಡೇಜಾ ದಾಳಿಗೆ ತತ್ತರಿಸಿದ ಆಸೀಸ್‌ 338 ರನ್‌ಗಳಿಗೆ ಆಲೌಟ್

ಗಿಲ್‌ ವಿಕೆಟ್‌ ಪತನದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಅಜಿಂಕ್ಯ ರಹಾನೆ ಹಾಗೂ ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ ಸಾಕಷ್ಟು ಎಚ್ಚರಿಕೆ ಆಟಕ್ಕೆ ಮೊರೆ ಹೋಗಿದ್ದಾರೆ. ಪರಿಣಾಮ ಈ ಜೋಡಿ 77 ಎಸೆತಗಳನ್ನು ಎದುರಿಸಿ ಕೇವಲ 11 ರನ್‌ಗಳ ಜತೆಯಾಟವಾಡಿದೆ. ರಹಾನೆ 40 ಎಸೆತಗಳನ್ನು ಎದುರಿಸಿ 5 ರನ್ ಬಾರಿಸಿದರೆ, ಪೂಜಾರ 53 ಎಸೆತಗಳನ್ನು ಎದುರಿಸಿ 9 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ಆಟಗಾರರ ಜತೆಯಾಟ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆಯಿದೆ.

ಇದಕ್ಕೂ ಮೊದಲು ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 338 ರನ್‌ಗಳನ್ನು ಕಲೆಹಾಕಿತು. ಮಾರ್ನಸ್ ಲಬುಶೇನ್‌ 91 ರನ್ ಬಾರಿಸಿ ಕೇವಲ 9 ರನ್‌ಗಳಿಂದ ಶತಕ ವಂಚಿತರಾದರೆ, ಸ್ಮಿತ್ ತಮ್ಮ ವೃತ್ತಿಜೀವನದ 27ನೇ ಟೆಸ್ಟ್ ಶತಕ ಪೂರೈಸಿದರು. ಭಾರತ ಪರ ರವೀಂದ್ರ ಜಡೇಜಾ 4, ಬುಮ್ರಾ ಹಾಗೂ ಸೈನಿ ತಲಾ 2 ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 338/10
ಟೀಂ ಇಂಡಿಯಾ: 96/2

(* ಎರಡನೇ ದಿನದಾಟದ ಅಂತ್ಯಕ್ಕೆ)