ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಸರಣಿಯಲ್ಲಿ 1-1 ಸಮಬಲವಿದೆ. ಮೂರನೇ ಪಂದ್ಯ ಗೆದ್ದ ತಂಡವನ್ನೇ ಉಳಿಸಿಕೊಳ್ಳುವ ಸುಳಿವನ್ನು ನಾಯಕ ಸೂರ್ಯಕುಮಾರ್ ಯಾದವ್ ನೀಡಿದ್ದು, ಇದರಿಂದಾಗಿ ಸಂಜು ಸ್ಯಾಮ್ಸನ್‌ಗೆ ಮತ್ತೊಮ್ಮೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.

ಕ್ವೀನ್ಸ್‌ಲ್ಯಾಂಡ್: ಆಸ್ಟ್ರೇಲಿಯಾ ವಿರುದ್ಧ ಗುರುವಾರ(ನವೆಂಬರ್ 06) ನಾಲ್ಕನೇ ಟಿ20 ಪಂದ್ಯಕ್ಕೆ ಭಾರತ ಸಜ್ಜಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದಿವೆ. ಮೊದಲ ಟಿ20 ಮಳೆಯಿಂದಾಗಿ ರದ್ದಾಗಿತ್ತು. ಗೆದ್ದವರು ಸರಣಿಯಲ್ಲಿ ಮುನ್ನಡೆ ಸಾಧಿಸಬಹುದು. ಹೀಗಾಗಿ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗ ಹೇಗಿರಬಹುದು ಎನ್ನುವ ಕುತೂಹಲ ಜೋರಾಗಿದೆ.

ಇನ್ನು ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಆಡುತ್ತಾರಾ ಎಂದು ಕ್ರಿಕೆಟ್ ಅಭಿಮಾನಿಗಳು ನೋಡುತ್ತಿದ್ದಾರೆ. ಮೂರನೇ ಟಿ20ಯಲ್ಲಿ ಸಂಜು ಆಡಿರಲಿಲ್ಲ. ಬದಲಿಗೆ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಆಗಿದ್ದರು. ಫಿನಿಶರ್ ಆಗಿಯೂ ಜಿತೇಶ್ ಶರ್ಮಾ ಮಿಂಚಿದ್ದರು. ಇನ್ನೊಂದು ಕಡೆ ಶುಭ್‌ಮನ್ ಗಿಲ್ ಆರಂಭಿಕನಾಗಿ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಸಂಜು ಮತ್ತೆ ಆರಂಭಿಕನಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವ ಕುತೂಹಲ ಜೋರಾಗಿದೆ.

ಸಂಜು ಆಡುವುದಿಲ್ಲ ಎಂಬ ಸುಳಿವನ್ನು ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ನೀಡಿದ್ದರು. ನಾಲ್ಕನೇ ಪಂದ್ಯದಲ್ಲಿ ಭಾರತ ಗೆದ್ದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮೂರನೇ ಟಿ20 ಗೆದ್ದ ನಂತರ ನಾಯಕ ಸೂರ್ಯಕುಮಾರ್ ಅವರ ಮಾತುಗಳು ಇದನ್ನೇ ಸೂಚಿಸುವಂತಿತ್ತು. ಮೂರನೇ ಪಂದ್ಯದಲ್ಲಿ ಸರಿಯಾದ ಕಾಂಬಿನೇಷನ್‌ನೊಂದಿಗೆ ಕಣಕ್ಕಿಳಿದಿದ್ದೆವು ಎಂದು ಪಂದ್ಯ ಗೆದ್ದ ನಂತರ ಸೂರ್ಯಕುಮಾರ್ ಯಾದವ್ ಹೇಳಿದ್ದರು. ಬದಲಿ ಆಟಗಾರರಾಗಿ ಬಂದವರೆಲ್ಲರೂ ಮೂರನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಸೂರ್ಯ ಪಂದ್ಯದ ನಂತರ ಆಡಂ ಗಿಲ್‌ಕ್ರಿಸ್ಟ್ ಅವರೊಂದಿಗೆ ಮಾತನಾಡುತ್ತಾ ಸ್ಪಷ್ಟಪಡಿಸಿದರು.

ನಾಲ್ಕನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ

ಸತತ 19-20 ಟಾಸ್‌ಗಳನ್ನು ಸೋತ ನಂತರ ಒಂದು ಟಾಸ್ ಗೆದ್ದಿದ್ದಕ್ಕೆ ಖುಷಿಯಾಗಿದೆ ಎಂದ ಸೂರ್ಯಕುಮಾರ್, ಮೂರನೇ ಟಿ20ಯಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಾಡಿದ ಮೂರು ಬದಲಾವಣೆಗಳು ಸರಿಯಾಗಿದ್ದವು ಮತ್ತು ಬದಲಿ ಆಟಗಾರರಾಗಿ ಬಂದ ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಸಂತೋಷವಿದೆ ಎಂದು ಹೇಳಿದರು.

ಇದರಿಂದಾಗಿ, ಬದಲಿ ಆಟಗಾರರಾಗಿ ತಂಡಕ್ಕೆ ಬಂದ ಅರ್ಶ್‌ದೀಪ್ ಸಿಂಗ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್‌ಗೆ ಮುಂದಿನ ಪಂದ್ಯಗಳಲ್ಲೂ ಅವಕಾಶ ಸಿಗುವುದು ಖಚಿತವಾಗಿದೆ. ಇದರಿಂದಾಗಿ, ಆಟಗಾರ ಸಂಜು ಸ್ಯಾಮ್ಸನ್, ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ವೇಗಿ ಹರ್ಷಿತ್ ರಾಣಾ ಮುಂದಿನ ಪಂದ್ಯಗಳಲ್ಲೂ ಹೊರಗುಳಿಯಬೇಕಾಗಬಹುದು ಎಂಬ ಸುಳಿವನ್ನು ಸೂರ್ಯಕುಮಾರ್ ನೀಡುತ್ತಿದ್ದಾರೆ. ತಂಡದಲ್ಲಿ ಅವಕಾಶವಿಲ್ಲದಿದ್ದರೂ, ಬದಲಿ ಆಟಗಾರರಾಗಿ ಬಂದ ಮೂವರು ಆಟಗಾರರು ಕಠಿಣ ಪ್ರಾಕ್ಟೀಸ್ ಮುಂದುವರಿಸಿದ್ದರು ಮತ್ತು ಅವರು ಅವಕಾಶಕ್ಕಾಗಿ ಕಾಯುತ್ತಿದ್ದರು ಎಂದು ಸೂರ್ಯಕುಮಾರ್ ಹೇಳಿದರು.

ನಾಲ್ಕನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ:

ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ, ಶಿವಂ ದುಬೆ, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ.

ಪಂದ್ಯ ಆರಂಭ: ಮಧ್ಯಾಹ್ನ 1.45ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.