ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2ನೇ ಏಕದಿನ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಕದನಕ್ಕೆ ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸಿಡ್ನಿ(ನ.29): ಸುಮಾರು 9 ತಿಂಗಳು ಬಳಿಕ ಏಕದಿನ ಕ್ರಿಕೆಟ್ ಆಡುತ್ತಿರುವ ಟೀಂ ಇಂಡಿಯಾ ಟಿ20 ಗುಂಗಿನಿಂದ ಹೊರಬಂದಂತಿಲ್ಲ. ಹೀಗಾಗಿ ಆಸ್ಪ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 66 ರನ್‌ಗಳ ಸೋಲುಂಡಿತ್ತು. ಇದೀಗ ಭಾನುವಾರ ಇಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧ 2ನೇ ಪಂದ್ಯದಲ್ಲಿ ಕೊಹ್ಲಿ ಪಡೆ ಗೆಲುವಿನ ವಿಶ್ವಾಸದಲ್ಲಿ ಕಣಕ್ಕಿಳಿಯುತ್ತಿದೆ. ಇದರೊಂದಿಗೆ ಸರಣಿ ಸಮಬಲದ ಲೆಕ್ಕಾಚಾರ ಹೊಂದಿದೆ. ಇತ್ತ ಆರೋನ್ ಫಿಂಚ್ ಪಡೆ ಮೊದಲ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆದಿದ್ದು, 2ನೇ ಪಂದ್ಯವನ್ನು ಗೆದ್ದು ಸರಣಿ ಜಯದ ಉತ್ಸಾಹದಲ್ಲಿದೆ.
ಸಿಡ್ನಿ ಕ್ರಿಕೆಟ್ ಮೈದಾನ (ಎಸ್‌ಸಿಜಿ)ದಲ್ಲಿ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. ಶೇ.50ರಷ್ಟುಪ್ರೇಕ್ಷಕರು ಪಂದ್ಯ ವೀಕ್ಷಿಸಲಿದ್ದಾರೆ. ಈಗಾಗಲೇ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ ಎಂದು ಕ್ರೀಡಾಂಗಣದ ಆಡಳಿತ ತಿಳಿಸಿದೆ.
ಎಚ್ಚರಿಕೆಯ ಆಟ ಅಗತ್ಯ:
ಈ ವರ್ಷದ ಆರಂಭದಲ್ಲಿ ಆಸ್ಪ್ರೇಲಿಯಾ ತಂಡ, ಭಾರತ ಪ್ರವಾಸ ಕೈಗೊಂಡಿದ್ದಾಗ ಟೀಂ ಇಂಡಿಯಾ 2-1ರಲ್ಲಿ ಏಕದಿನ ಸರಣಿ ಜಯಿಸಿತ್ತು. ಇದೀಗ ಆಸ್ಪ್ರೇಲಿಯಾ ಆ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಆಸೀಸ್ ವಿರುದ್ಧ ಮೊದಲ ಪಂದ್ಯದಲ್ಲಿ ಕೊಹ್ಲಿ ಪಡೆ ಪಂದ್ಯದುದ್ದಕ್ಕೂ ಎಡವಟ್ಟುಗಳನ್ನು ಮಾಡಿತು. ಕ್ಷೇತ್ರರಕ್ಷಣೆಯಲ್ಲಿ ಆಟಗಾರರು ಸಂಪೂರ್ಣ ವೈಫಲ್ಯ ಕಂಡರು. ಕ್ಯಾಚ್‌ಗಳನ್ನು ಕೈ ಚೆಲ್ಲಿದರು. ಬ್ಯಾಟಿಂಗ್‌ನಲ್ಲಿ ಧವನ್, ಹಾರ್ದಿಕ್ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ತೋರಿದರು. ಇನ್ನು ಬೌಲಿಂಗ್‌ನಲ್ಲಿ ವೇಗಿ ಮೊಹಮ್ಮದ್ ಶಮಿ ಹೊರತುಪಡಿಸಿದರೆ ಉಳಿದ ಬೌಲರ್‌ಗಳು ದುಬಾರಿಯಾದರು. ಹೀಗಾಗಿ 2ನೇ ಪಂದ್ಯದಲ್ಲಿ ಕೊಹ್ಲಿ ಬಳಗ ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಬೇಕಿದೆ.
ಬದಲಾವಣೆ ಸಾಧ್ಯತೆ:
ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಟೀಂ ಇಂಡಿಯಾ ಅಂತಿಮ 11ರಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕೈ ಬಿಟ್ಟು, ಸಂಜು ಸ್ಯಾಮ್ಸನ್‌ರನ್ನು ಸೇರಿಸಿಕೊಳ್ಳುವ ಸಾಧ್ಯತೆ ಯಿದೆ. ರಾಹುಲ್‌ರನ್ನು ಕೀಪಿಂಗ್‌ನಿಂದ ಮುಕ್ತರನ್ನಾಗಿಸಿ, ಸಂಜುಗೆ ವಿಕೆಟ್ ಹಿಂದಿನ ಜವಾಬ್ದಾರಿ ನೀಡುವ ಯೋಚನೆ ಕೊಹ್ಲಿಗಿದೆ ಎನ್ನಲಾಗಿದೆ. ಉಳಿದಂತೆ ಧವನ್ ಜೊತೆ ಆರಂಭಿಕನಾಗಿ ಕರ್ನಾಟಕದ ಮಯಾಂಕ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ಕೊಹ್ಲಿ, ರಾಹುಲ್, ಜಡೇಜಾ ಜವಾಬ್ದಾರಿಯುತ ಆಟವಾಡಬೇಕಿದೆ. ವೇಗಿ ನವದೀಪ್ ಸೈನಿ ಬದಲು ತಮಿಳುನಾಡಿನ ವೇಗದ ಬೌಲರ್ ಟಿ. ನಟರಾಜನ್‌ಗೆ ಅವಕಾಶ ನೀಡಬೇಕಿದೆ. ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಸ್ಪಿನ್ನರ್ ಯಜುವೇಂದ್ರ ಚಹಲ್ ಬದಲಾಗಿ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಅಂತಿಮ 11ರಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆ ದಟ್ಟವಾಗಿದೆ.
ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ..?
ಬಲಾಢ್ಯ ಆಸೀಸ್:
ಮತ್ತೊಂದೆಡೆ ಆಸ್ಪ್ರೇಲಿಯಾ ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಉತ್ತಮ ಆಟಗಾರರನ್ನು ಹೊಂದಿದ್ದು ಸದೃಢವಾಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ವಾರ್ನರ್, ಫಿಂಚ್, ಸ್ಮಿತ್ ಫಾಮ್‌ರ್‍ನಲ್ಲಿದ್ದಾರೆ. ಆಲ್ರೌಂಡರ್ ಸ್ಟೋಯ್ನಿಸ್ ಗಾಯಗೊಂಡಿದ್ದು, ಅವರ ಬದಲಾಗಿ ಕೆಮರೂನ್ ಗ್ರೀನ್ ಅಥವಾ ಮೋಸಿಸ್ ಹೆನ್ರಿಕ್ಸ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಮ್ಯಾಕ್ಸ್‌ವೆಲ್, ಲಬುಶೇನ್, ಅಲೆಕ್ಸ್ ಕೇರಿ, ಸ್ಟಾರ್ಕ್, ಹೇಜಲ್‌ವುಡ್, ಕಮಿನ್ಸ್ ಅವರಂತಹ ಶ್ರೇಷ್ಠ ಆಟಗಾರರ ದೊಡ್ಡ ದಂದು ಆಸೀಸ್ ಬಲವನ್ನು ಹೆಚ್ಚಿಸಿದೆ.
ಪಿಚ್ ರಿಪೋರ್ಟ್:
ಬ್ಯಾಟಿಂಗ್ ಸ್ನೇಹಿ ಪಿಚ್ ಇದಾಗಿದ್ದು, ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಿದ್ದಾರೆ. ಸಮಯ ಕಳೆದಂತೆ ಪಿಚ್ ತಿರುವು ಪಡೆಯಲಿದೆ. ಇಲ್ಲಿ ನಡೆದಿರುವ ಕಳೆದ 8 ಪಂದ್ಯಗಳಲ್ಲಿ 7ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ. ಟಾಸ್ ಪ್ರಮುಖ ಪಾತ್ರವಹಿಸಲಿದೆ.
ಸಂಭವನೀಯ ಆಟಗಾರರ ಪಟ್ಟಿ:
ಭಾರತ: ಧವನ್, ಮಯಾಂಕ್, ಕೊಹ್ಲಿ (ನಾಯಕ), ಶ್ರೇಯಸ್, ರಾಹುಲ್, ಹಾರ್ದಿಕ್, ಜಡೇಜಾ, ಸೈನಿ/ನಟರಾಜನ್, ಶಮಿ, ಚಹಲ್/ಕುಲ್ದೀಪ್, ಬುಮ್ರಾ.
ಆಸ್ಪ್ರೇಲಿಯಾ: ವಾರ್ನರ್, ಫಿಂಚ್ (ನಾಯಕ), ಸ್ಮಿತ್, ಲಬುಶೇನ್, ಅಲೆಕ್ಸ್, ಮ್ಯಾಕ್ಸ್‌ವೆಲ್, ಕೆಮರೂನ್, ಕಮಿನ್ಸ್, ಸ್ಟಾರ್ಕ್, ಜಂಪಾ, ಹೇಜಲ್‌ವುಡ್
ಪಂದ್ಯ ಆರಂಭ: ಬೆಳಗ್ಗೆ 9.10ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 29, 2020, 8:40 AM IST