Asianet Suvarna News Asianet Suvarna News

Ind vs NZ: ಕಿವೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ರೆಕಾರ್ಡ್‌ ಬ್ರೇಕ್‌ ಮಾಡಲು ಟೀಂ ಇಂಡಿಯಾ ರೆಡಿ..!

* ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ನವೆಂಬರ್ 25ರಿಂದ ಆರಂಭ
* ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ
* ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಲಿರುವ ಶಿಖರ್ ಧವನ್

India tour of New Zealand Team India likely to break 2 Records of Pakistan in New Zealand Soil kvn
Author
First Published Nov 24, 2022, 4:56 PM IST

ಆಕ್ಲೆಂಡ್(ನ.24): ಭಾರತ-ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ನವೆಂಬರ್ 25ರಿಂದ ಆಕ್ಲೆಂಡ್‌ನಲ್ಲಿ ಆರಂಭವಾಗಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್, ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇನ್ನು ಇದೇ ಸರಣಿಯಲ್ಲಿ ಟೀಂ ಇಂಡಿಯಾ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.2 ಸ್ಥಾನಕ್ಕೇರಲು ಸುವರ್ಣಾವಕಾಶವಿದೆ.

ಇದಷ್ಟೇ ಅಲ್ಲದೇ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ತಂಡದ ಹೆಸರಿನಲ್ಲಿರುವ ಎರಡು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಸುವರ್ಣಾವಕಾಶವಿದೆ. ಇದರ ಜತೆಗೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಸರ್ ವೀವ್ ರಿಚರ್ಡ್ಸ್‌ ಅವರ ಹೆಸರಿನಲ್ಲಿರುವ ಗರಿಷ್ಠ ರನ್ ದಾಖಲೆ ಹಿಂದಿಕ್ಕಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಎಲ್ಲಾ ದಾಖಲೆಗಳ ಬಗ್ಗೆ ನಾವೀಗ ಒಂದೊಂದಾಗಿ ನೋಡೋಣ ಬನ್ನಿ

ಟೀಂ ಇಂಡಿಯಾ ಏಕದಿನ ಶ್ರೇಯಾಂಕದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ. ಸದ್ಯ ಇಂಗ್ಲೆಂಡ್ 119 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, 114 ರೇಟಿಂಗ್ ಅಂಕ ಹೊಂದಿರುವ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. ಭಾರತ 112 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಒಂದು ವೇಳೆ ಭಾರತ ತಂಡವು 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಥವಾ 3-0 ಅಂತರದಲ್ಲಿ ಜಯಿಸಿದರೆ ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಎರಡನೇ ಸ್ಥಾನಕ್ಕೇರಲಿದೆ. ಏಕದಿನ ಸರಣಿಯನ್ನು ಭಾರತ 2-1 ಅಂತರದಲ್ಲಿ ಜಯಿಸಿದರೆ ಟೀಂ ಇಂಡಿಯಾ 113 ರೇಟಿಂಗ್ ಅಂಕ ಪಡೆದು ಎರಡನೇ ಸ್ಥಾನಕ್ಕೇರಲಿದ್ದು, 112 ಅಂಕಗಳೊಂದಿಗೆ ನ್ಯೂಜಿಲೆಂಡ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಒಂದು ವೇಳೆ ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್‌ ಸ್ವೀಪ್ ಮಾಡಿದರೆ, ಭಾರತ 116 ರೇಟಿಂಗ್ ಅಂಕ ಪಡೆಯಲಿದೆ. ಇನ್ನು ನ್ಯೂಜಿಲೆಂಡ್ 108 ಅಂಕಗಳನ್ನು ಹೊಂದಲಿದೆ.

ಜಿಂಬಾಬ್ವೆ ಸರಣಿಗೆ ನಾಯಕತ್ವದಿಂದ ಕೆಳಗಿಳಿಸಿದ್ದರ ಬಗ್ಗೆ 'ಗಬ್ಬರ್ ಸಿಂಗ್' ಧವನ್ ಹೇಳಿದ್ದೇನು..?

ಟೀಂ ಇಂಡಿಯಾ ಹಂಗಾಮಿ ನಾಯಕ ಶಿಖರ್ ಧವನ್, ಸದ್ಯ ಏಕದಿನ ಕ್ರಿಕೆಟ್‌ನಲ್ಲಿ 161 ಪಂದ್ಯಗಳನ್ನಾಡಿ 6,672 ರನ್‌ ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಧವನ್‌ 53ನೇ ಸ್ಥಾನದಲ್ಲಿದ್ದಾರೆ.  ಇನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ದಿಗ್ಗಜ ವೀವ್ ರಿಚರ್ಡ್ಸ್‌ 187 ಪಂದ್ಯಗಳನ್ನಾಡಿ 6,721 ರನ್ ಬಾರಿಸಿದ್ದಾರೆ. ಒಂದು ವೇಳೆ ಧವನ್ ಈ ಸರಣಿಯಲ್ಲಿ ಕೇವಲ 50 ರನ್ ಬಾರಿಸಿದರೂ ಸಾಕು, ರಿಚರ್ಡ್ಸ್ ದಾಖಲೆ ಧವನ್ ಪಾಲಾಗಲಿದೆ.

ಪಾಕಿಸ್ತಾನದ ಎರಡು ದಾಖಲೆ ಧೂಳೀಪಟ..?

ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಟೀಂ ಇಂಡಿಯಾ ಒಂದು ಗೆಲುವು ದಾಖಲಿಸಿದರೂ ಸಾಕು ಪಾಕಿಸ್ತಾನವನ್ನು ಹಿಂದಿಕ್ಕಿ ಟೀಂ ಇಂಡಿಯಾ ಕಿವೀಸ್ ಎದುರು ಅತಿಹೆಚ್ಚು ಪಂದ್ಯ ಜಯಿಸಿದ ತಂಡ ಎನಿಸಿಕೊಳ್ಳಲಿದೆ. ಸದ್ಯ ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ದ 110 ಪಂದ್ಯಗಳನ್ನಾಡಿ 55 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಎದುರು 107 ಏಕದಿನ ಪಂದ್ಯಗಳನ್ನಾಡಿ 55 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದೀಗ ಟೀಂ ಇಂಡಿಯಾ ಒಂದು ಗೆಲುವು ದಾಖಲಿಸಿದರೂ ಸಾಕು, ಕಿವೀಸ್ ಎದುರು ಗರಿಷ್ಠ ಗೆಲುವು ಕಂಡ ಏಷ್ಯಾದ ಮೊದಲ ತಂಡ ಎನಿಸಿಕೊಳ್ಳಲಿದೆ.

ಇನ್ನೊಂದೆಡೆ, ನ್ಯೂಜಿಲೆಂಡ್ ನೆಲದಲ್ಲಿ ಭಾರತ ತಂಡವು 42 ಪಂದ್ಯಗಳನ್ನಾಡಿ 14 ಗೆಲುವು ಸಾಧಿಸಿದೆ. ಇದೇ ವೇಳೆ ಪಾಕಿಸ್ತಾನ ತಂಡವು ಕಿವೀಸ್ ನೆಲದಲ್ಲಿ 49 ಏಕದಿನ ಪಂದ್ಯಗಳನ್ನಾಡಿ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇದೀಗ ಒಂದು ವೇಳೆ ಟೀಂ ಇಂಡಿಯಾ, ಈ ಸರಣಿಯಲ್ಲಿ ಎರಡು ಗೆಲುವು ದಾಖಲಿಸಿದರೇ, ಕಿವೀಸ್‌ ನೆಲದಲ್ಲಿ ಅತಿಹೆಚ್ಚು ಗೆಲುವು ದಾಖಲಿಸಿದ ಏಷ್ಯಾದ ತಂಡ ಎನ್ನುವ ಕೀರ್ತಿಗೆ ಟೀಂ ಇಂಡಿಯಾ ಪಾತ್ರವಾಗಲಿದೆ.

Follow Us:
Download App:
  • android
  • ios