ಆಸ್ಟ್ರೇಲಿಯಾ ಬಗ್ಗುಬಡಿದು ಪಾಕ್ ದಾಖಲೆ ಸರಿಗಟ್ಟಿದ ಟೀಂ ಇಂಡಿಯಾ
* ಅಸ್ಟ್ರೇಲಿಯಾ ಎದುರಿನ ಎರಡನೇ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ
* 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ
* ಆಸೀಸ್ ಮಣಿಸಿ ಪಾಕ್ ದಾಖಲೆಯನ್ನು ಸರಿಗಟ್ಟಿದ ರೋಹಿತ್ ಶರ್ಮಾ ಪಡೆ
ನಾಗ್ಪುರ(ಸೆ.24): 2ನೇ ಟಿ20 ಪಂದ್ಯ ಅಭಿಮಾನಿಗಳ ತಾಳ್ಮೆ ಪರೀಕ್ಷಿಸಿದರೂ ಮನರಂಜನೆಗೆ ಮೋಸವಾಗಲಿಲ್ಲ. ಆಸ್ಪ್ರೇಲಿಯಾ ನೀಡಿದ್ದ ದೊಡ್ಡ ಗುರಿಯನ್ನು ನಿರಾಯಾಸವಾಗಿ ಬೆನ್ನತ್ತಿದ ಭಾರತ 6 ವಿಕೆಟ್ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದಷ್ಟೇ ಅಲ್ಲದೇ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆಲ್ಲುವ ಮೂಲಕ ಬದ್ದ ಎದುರಾಳಿ ಪಾಕಿಸ್ತಾನ ಕ್ರಿಕೆಟ್ ತಂಡದ ದಾಖಲೆಯನ್ನು ಸರಿಗಟ್ಟಿದೆ.
ಮೈದಾನದಲ್ಲಿ ಮಳೆ ನೀರು ನಿಂತಿದ್ದ ಕಾರಣ ಅದನ್ನು ತೆರವುಗೊಳಿಸಲು ಸಾಕಷ್ಟುಸಮಯವಾಯಿತು. ಪಂದ್ಯ ಎರಡೂವರೆ ಗಂಟೆ ತಡವಾದ ಕಾರಣ ತಲಾ 8 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಆಸ್ಪ್ರೇಲಿಯಾ 8 ಓವರಲ್ಲಿ 5 ವಿಕೆಟ್‌ಗೆ 90 ರನ್ ಸಿಡಿಸಿದರೆ, ಭಾರತ ಇನ್ನೂ 4 ಎಸೆತ ಬಾಕಿ ಇರುವಂತೆಯೇ ಜಯದ ನಗೆ ಬೀರಿತು.
ಹೌದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹೊಸ ದಾಖಲೆಯೊಂದನ್ನು ಬರೆದಿದೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಗೆಲುವು ದಾಖಲಿಸಿದ ತಂಡ ಎನ್ನುವ ಜಂಟಿ ಹೆಗ್ಗಳಿಗೆ ಪಾತ್ರವಾಗಿದೆ. ಈ ಮೂಲಕ ಪಾಕಿಸ್ತಾನದ ಜತೆ ಜಂಟಿ ದಾಖಲೆ ನಿರ್ಮಿಸಿದೆ. ಆಸ್ಟ್ರೇಲಿಯಾ ಎದುರು ಎರಡನೇ ಟಿ20 ಪಂದ್ಯದಲ್ಲಿ ಸಾಧಿಸಿದ ಗೆಲುವು, ಈ ವರ್ಷ ಭಾರತಕ್ಕೆ ಒಲಿದ 20ನೇ ಗೆಲುವಾಗಿದೆ.
IND vs AUS ಬೌಂಡರಿ ಸಿಕ್ಸರ್ ಅಬ್ಬರ, 2ನೇ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು!
2021ರಲ್ಲಿ ಪಾಕಿಸ್ತಾನ 20 ಗೆಲುವುಗಳನ್ನು ಸಾಧಿಸಿ ದಾಖಲೆ ಬರೆದಿತ್ತು. ಇದೀಗ ಭಾರತ ಆ ದಾಖಲೆಯನ್ನು ಸರಿಗಟ್ಟಿದೆ. ಇನ್ನೊಂದು ಗೆಲುವು ದಾಖಲಿಸಿದರೆ ಟೀಂ ಇಂಡಿಯಾ ವಿಶ್ವದಾಖಲೆ ನಿರ್ಮಿಸಲಿದೆ. ಟೀಂ ಇಂಡಿಯಾ ಈಗಾಗಲೇ ಈ ವರ್ಷದಲ್ಲಿ 27 ಟಿ20 ಪಂದ್ಯಗಳನ್ನಾಡಿದ್ದು, ಈ ಸರಣಿಯಲ್ಲಿ ಇನ್ನೊಂದು ಪಂದ್ಯವನ್ನಾಡಲಿದೆ. ಇದಾದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ನಂತರ ಟಿ20 ಸರಣಿಯನ್ನು ಆಸ್ಟ್ರೇಲಿಯಾಗೆ ಪ್ರಯಾಣಿಸಲಿದೆ.
ಶುಕ್ರವಾರ ಇಡೀ ದಿನ ಮಳೆ ಬರದಿದ್ದರೂ ಮೈದಾನದ ಒದ್ದೆ!
ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದ ಒಳಚರಂಡಿ ವ್ಯವಸ್ಥೆ ಭಾರೀ ಟೀಕೆಗೆ ಗುರಿಯಾಗಿದೆ. ಶುಕ್ರವಾರ ಇಡೀ ದಿನ ಮಳೆ ಬರದಿದ್ದರೂ ಕಳೆದ ಒಂದೆರಡು ದಿನ ಸುರಿದಿದ್ದ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತ್ತಿತ್ತು. ಮಿಡ್ ವಿಕೆಟ್ ಬೌಂಡರಿ ಬಳಿ ಭಾರೀ ತೇವಾಂಶವಿತ್ತು. ಕಾಲಿಟ್ಟರೆ ಜಾರುವ ಪರಿಸ್ಥಿತಿ ಇದ್ದ ಕಾರಣ ಆ ಸ್ಥಳವನ್ನು ಒಣಗಿಸಲು ಮೈದಾನ ಸಿಬ್ಬಂದಿ ಹರಸಾಹಸ ಪಟ್ಟರು. ಸಂಜೆ 7 ಗಂಟೆಗೆ ಆರಂಭಗೊಳ್ಳಬೇಕಿದ್ದ ಪಂದ್ಯವನ್ನು ಮುಂದೂಡತ್ತಲೇ ಹೋಗಲಾಯಿತು. 8 ಗಂಟೆಗೆ ಪರಿಶೀಲನೆ ನಡೆಸಿದಾಗಲೂ ಮೈದಾನ ಆಟಕ್ಕೆ ಯೋಗ್ಯವಾಗಿರಲಿಲ್ಲ.
ಕೊನೆಗೆ ರಾತ್ರಿ 8.45ಕ್ಕೆ ಪರಿಶೀಲನೆ ನಡೆಸಿದಾಗ 9.15ಕ್ಕೆ ಟಾಸ್ ನಡೆಸಿ ರಾತ್ರಿ 9.30ಕ್ಕೆ ಪಂದ್ಯ ಆರಂಭಿಸಲು ನಿರ್ಧರಿಸಲಾಯಿತು. ಪ್ರತಿ ಇನ್ನಿಂಗ್ಸಲ್ಲಿ ಬೌಲರ್ ಗರಿಷ್ಠ 2 ಓವರ್ ಬೌಲ್ ಮಾಡಬಹುದಿತ್ತು. ಮೊದಲ 2 ಓವರ್ ಪವರ್-ಪ್ಲೇ ಇತ್ತು.