ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ; ಇಬ್ಬರು ತಾರಾ ಆಟಗಾರರಿಗೆ ರೆಸ್ಟ್
* ವೆಸ್ಟ್ ಇಂಡೀಸ್ ಎದುರಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
* ಜುಲೈ 12ರಿಂದ ಎರಡು ಪಂದ್ಯಗಳ ಸರಣಿ ಆರಂಭ
* ಪೂಜಾರ, ಶಮಿಗೆ ವಿಶ್ರಾಂತಿ
ಮುಂಬೈ(ಜೂ.23): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ವೆಸ್ಟ್ ಇಂಡೀಸ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದ್ದು, ರೋಹಿತ್ ಶರ್ಮಾ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್ ಸರಣಿಗೆ ಅಜಿಂಕ್ಯ ರಹಾನೆಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಇನ್ನು ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ ವಿಶ್ರಾಂತಿ ನೀಡಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿದ್ದು, ಜುಲೈ 20ರಿಂದ 2ನೇ ಟೆಸ್ಟ್ ಪಂದ್ಯ ಟ್ರಿನಿಡಾಡ್ನಲ್ಲಿ ನಡೆಯಲಿದೆ. ಬಳಿಕ ಜುಲೈ 27, 29ರಂದು ಮೊದಲೆರಡು ಏಕದಿನಕ್ಕೆ ಬಾರ್ಬಡಾಸ್, ಆಗಸ್ಟ್ 1ರಂದು 3ನೇ ಏಕದಿನಕ್ಕೆ ಟ್ರಿನಿಡಾಡ್ ಆತಿಥ್ಯ ವಹಿಸಲಿದೆ.
ಇನ್ನು ಆಗಸ್ಟ್ 3ರಿಂದ ಟ್ರಿನಿಡಾಡ್ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, 2 ಮತ್ತು 3ನೇ ಪಂದ್ಯ ಕ್ರಮವಾಗಿ ಆಗಸ್ಟ್ 6, 8ಕ್ಕೆ ಗಯಾನದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಇನ್ನು ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿಲ್ಲ.
ವಿರಾಟ್ ಕೊಹ್ಲಿ ಎದುರು ಆಡುವುದೇ ನನ್ನ ಪರಮ ಗುರಿ: ಪಾಕ್ ಮೂಲದ USA ಕ್ರಿಕೆಟಿಗನ ಶಪಥ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿ, ಫಾರ್ಮ್‌ಗೆ ಮರಳಿದ್ದ ಅಜಿಂಕ್ಯ ರಹಾನೆ ಅವರಿಗೆ ಇದೀಗ ಉಪನಾಯಕ ಪಟ್ಟ ಕಟ್ಟಲಾಗಿದೆ. ಇನ್ನು ಡೆಲ್ಲಿ ಮೂಲದ ವೇಗಿ ನವದೀಪ್ ಸೈನಿ ಕೂಡಾ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೋಲಿನ ಬಳಿಕ ಟೆಸ್ಟ್ ತಂಡದಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇನ್ನು ವಿರಾಟ್ ಕೊಹ್ಲಿ ಕೂಡಾ ವಿಂಡೀಸ್ ಪ್ರವಾಸ ಮಾಡಲಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಮಿಂಚಿದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಹಾಗೂ ಮುಕೇಶ್ ಕುಮಾರ್ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಏಕದಿನ ಕ್ರಿಕೆಟ್‌ಗೆ ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಜಮ್ಮು ಕಾಶ್ಮೀರದ ಮಾರಕ ವೇಗಿ ಉಮ್ರಾನ್ ಮಲಿಕ್, ಐಪಿಎಲ್‌ನಲ್ಲಿ ಮಿಂಚಿದ ಮುಕೇಶ್ ಕುಮಾರ್ ಹಾಗೂ ಸೌರಾಷ್ಟ್ರ ಮೂಲದ ಅನುಭವಿ ಎಡಗೈ ವೇಗಿ ಜಯದೇವ್ ಉನಾದ್ಕತ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಶುಭ್‌ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ(ಉಪನಾಯಕ), ಕೆ ಎಸ್ ಭರತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.
ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.