ಲಂಕಾ ಎದುರು ಮೊದಲ ಟೆಸ್ಟ್‌ನಲ್ಲಿ ಕಿವೀಸ್‌ಗೆ ವಿರೋಚಿತ ಜಯಕೇನ್ ವಿಲಿಯಮ್ಸನ್ ಆಕರ್ಷಕ ಶತಕ, ಕಿವೀಸ್‌ಗೆ 2 ವಿಕೆಟ್ ಜಯಲಂಕಾ ಸೋಲಿನೊಂದಿಗೆ ಟೀಂ ಇಂಡಿಯಾ, ಅಧಿಕೃತವಾಗಿ WTC ಫೈನಲ್ ಪ್ರವೇಶ

ಕ್ರೈಸ್ಟ್‌ಚರ್ಚ್‌(ಮಾ.13): ಕ್ರಿಕೆಟ್‌ ಅಭಿಮಾನಿಗಳು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವು 2 ವಿಕೆಟ್‌ ರೋಚಕ ಜಯ ಸಾಧಿಸಿದೆ. ದಿನದಾಟದ ಕೊನೆಯ ಎಸೆತದಲ್ಲಿ ಒಂದು ರನ್ ಕಲೆಹಾಕುವುದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ. ಇನ್ನು ಈ ಗೆಲುವು ಕೇವಲ ಕಿವೀಸ್‌ಗೆ ಮಾತ್ರವಲ್ಲದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಕಾರಣ ಶ್ರೀಲಂಕಾ ತಂಡವು ಮೊದಲ ಟೆಸ್ಟ್‌ ಪಂದ್ಯ ಸೋಲುತ್ತಿದ್ದಂತೆಯೇ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ.

ಸದ್ಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡುತ್ತಿದೆ. ಕೊನೆಯ ಟೆಸ್ಟ್ ಪಂದ್ಯ ನೀರಸ ಡ್ರಾನತ್ತ ಸಾಗುತ್ತಿದೆ. ಹೀಗಿರುವಾಗಲೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಧಿಕೃತವಾಗಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ಭಾರತ ತಂಡವು ಮುಂಬರುವ ಜೂನ್ 07ರಿಂದ 11ರ ವರೆಗೆ ಲಂಡನ್‌ನ ದ ಓವಲ್‌ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಚಾಂಪಿಯನ್‌ ಪಟ್ಟಕ್ಕಾಗಿ ಆಸ್ಟ್ರೇಲಿಯಾ ಎದುರು ಕಾದಾಡಲಿದೆ.

Ahmedabad Test: ನೀರಸ ಡ್ರಾನತ್ತ ಇಂಡೋ-ಆಸೀಸ್ ಕೊನೆಯ ಟೆಸ್ಟ್‌

ಈಗಾಗಲೇ ಆಸ್ಟ್ರೇಲಿಯಾ ತಂಡವು, ಭಾರತ ಎದುರು ಇಂದೋರ್ ಟೆಸ್ಟ್‌ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಅಧಿಕೃತವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಇನ್ನು ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿಯೂ ಭಾರತ ಫೈನಲ್‌ ಪ್ರವೇಶಿಸಿತ್ತಾದರೂ, ಸೌಥಾಂಪ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು ಸೋಲು ಕಾಣುವ ಮೂಲಕ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಲು ಮತ್ತೊಮ್ಮೆ ಅವಕಾಶ ಬಂದಿದೆ.

Scroll to load tweet…

ಹೇಗಿತ್ತು ಲಂಕಾ-ಕಿವೀಸ್ ಮೊದಲ ಟೆಸ್ಟ್..?

ಇಲ್ಲಿನ ಹೇಗ್ಲೆ ಓವಲ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ನಾಯಕ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡಿಸ್ ಆಕರ್ಷಕ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 355 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಆತಿಥೇಯ ನ್ಯೂಜಿಲೆಂಡ್ ತಂಡವು 188 ರನ್ ಬಾರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ ಡೇರಲ್ ಮಿಚೆಲ್ ಬಾರಿಸಿದ ಸಮಯೋಚಿತ ಶತಕ ಹಾಗೂ ಮ್ಯಾಟ್ ಹೆನ್ರಿ ಬಾರಿಸಿದ ಮಿಂಚಿನ ಅರ್ಧಶತಕದ ನೆರವಿನಿಂದ 373 ರನ್ ಬಾರಿಸುವ ಮೂಲಕ 22 ರನ್‌ಗಳ ಇನಿಂಗ್ಸ್‌ ಮುನ್ನಡೆ ಗಳಿಸಿತು.

Scroll to load tweet…

ಇನ್ನು ಅಲ್ಪ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಶ್ರೀಲಂಕಾ ತಂಡವು ಮಾಜಿ ನಾಯಕ ಏಂಜಲೋ ಮ್ಯಾಥ್ಯೂಸ್ ಬಾರಿಸಿದ ಕಲಾತ್ಮಕ ಶತಕದ ನೆರವಿನಿಂದ ಲಂಕಾ ತಂಡವು 302 ರನ್ ಕಲೆಹಾಕಿತು. ಹೀಗಾಗಿ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಕಿವೀಸ್‌ ತಂಡಕ್ಕೆ 280 ರನ್‌ಗಳ ಸವಾಲಿನ ಗುರಿ ನೀಡಿತು. ನಾಲ್ಕನೇ ದಿನದಾಟದ ಕೊನೆಯಲ್ಲೇ ಕಿವೀಸ್‌ ತನ್ನ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ ವಿಕೆಟ್ ಕಳೆದುಕೊಂಡಿತು. ಇನ್ನು ಇಂದು ಬೆಳಗ್ಗೆ ಮತ್ತೋರ್ವ ಆರಂಭಿಕ ಬ್ಯಾಟರ್ ಟಾಮ್ ವಿಕೆಟ್ ಕಳೆದುಕೊಂಡಿತು. ಆದರೆ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೇರಲ್ ಮಿಚೆಲ್ 4ನೇ ವಿಕೆಟ್‌ಗೆ 142 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡೇರಲ್ ಮಿಚೆಲ್‌ ಕೇವಲ 86 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 86 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಿದ ಕೇನ್ ವಿಲಿಯಮ್ಸನ್‌ 194 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 121 ರನ್ ಸಿಡಿಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.