ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿ.ವಿ. ಸಿಂಧುಶುಭಾರಂಭ ಮಾಡಿದ ಸೈನಾ ನೆಹ್ವಾಲ್‌, ಲಕ್ಷ್ಯ ಸೆನ್ಭಾರತದ ಡಬಲ್ಸ್‌ ಜೋಡಿಗಳು ಕೂಡಾ ಶುಭಾರಂಭ

ನವದೆಹಲಿ(ಜ.18): ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್‌, ಸೈನಾ ನೆಹ್ವಾಲ್‌ ಶುಭಾರಂಭ ಮಾಡಿದ್ದು, 2ನೇ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಪಿ.ವಿ.ಸಿಂಧು ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.

ಸೋಮವಾರ ಆರಂಭಗೊಂಡ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಸೇನ್‌, ಭಾರತದವರೇ ಆದ ವಿಶ್ವ ನಂ.8 ಎಚ್‌.ಎಸ್‌.ಪ್ರಣಯ್‌ ವಿರುದ್ಧ 21-14, 21-15 ನೇರ ಗೇಮ್‌ಗಳಲ್ಲಿ ಜಯಭೇರಿ ಬಾರಿಸಿ, ಕಳೆದ ವಾರದ ಮಲೇಷ್ಯಾ ಓಪನ್‌ ಸೋಲಿಗೆ ಸೇಡು ತೀರಿಸಿಕೊಂಡರು. ಮಹಿಳಾ ಸಿಂಗಲ್ಸ್‌ನಲ್ಲಿ 2017ರ ಚಾಂಪಿಯನ್‌ ಸಿಂಧು, 30ನೇ ರ‍್ಯಾಂಕಿಂಗ್‌ನ ಥಾಯ್ಲೆಂಡ್‌ನ ಸುಪನಿದಾ ವಿರುದ್ಧ 21-14, 22-20 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. 

Scroll to load tweet…

2 ಬಾರಿ ಪ್ರಶಸ್ತಿ ವಿಜೇತ ಸೈನಾ ನೆಹ್ವಾಲ್ ಡೆನ್ಮಾರ್ಕ್‌ನ ಮಿಯಾ ವಿರುದ್ಧ ಜಯ ಸಾಧಿಸಿದರು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಂಕಿರೆಡ್ಡಿ-ಚಿರಾಗ್‌ ಶೆಟ್ಟಿ, ಕೃಷ್ಣಪ್ರಸಾದ್‌-ವಿಷ್ಣುವರ್ಧನ್‌, ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌-ತ್ರೀಸಾ ಜಾಲಿ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ಗೆ ಪ್ರವೇಶಿಸಿದರು.

ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ: ನೋವಾಕ್ ಜೋಕೋವಿಚ್‌ ಶುಭಾರಂಭ 

ಮೆಲ್ಬರ್ನ್‌: ಕಳೆದ ವರ್ಷ ಕೋವಿಡ್‌ ಲಸಿಕೆ ಪಡೆಯದೆ ಟೂರ್ನಿಯಿಂದ ಹೊರಬಿದ್ದಿದ್ದಲ್ಲದೇ ಆಸ್ಪ್ರೇಲಿಯಾದಿಂದಲೇ ಗಡೀಪಾರಾಗಿದ್ದ 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಈ ವರ್ಷದ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

9 ಬಾರಿ ಚಾಂಪಿಯನ್‌ ಜೋಕೋವಿಚ್ ಮಂಗಳವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸ್ಪೇನ್‌ನ ರಾಬೆರ್ಟೊ ಕಾರ್ಬಾಲೆಸ್‌ ವಿರುದ್ಧ 6-3, 6-4, 6-0 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ವಿಶ್ವ ನಂ.6 ಆ್ಯಂಡ್ರೆ ರುಬೆಲೆವ್‌ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ವಿರುದ್ಧ ಗೆದ್ದರೆ, 3 ಗ್ರ್ಯಾನ್‌ಸ್ಲಾಂ ವಿಜೇತ ಬ್ರಿಟನ್‌ನ ಆ್ಯಂಡಿ ಮರ್ರೆ ಇಟಲಿಯ ಬೆರೆಟ್ಟಿನಿ ವಿರುದ್ಧ 5 ಸೆಟ್‌ಗಳ ರೋಚಕ ಗೆಲುವು ಸಾಧಿಸಿದರು. ವಿಶ್ವ ನಂ.13 ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಡೆನ್ಮಾರ್ಕ್ನ ಹಾಲ್ಗರ್‌ ರ್ಯೂನ್‌ ಕೂಡಾ 2ನೇ ಸುತ್ತಿಗೆ ಲಗ್ಗೆ ಇಟ್ಟರು.

ಆಸ್ಪ್ರೇಲಿಯನ್‌ ಓಪನ್‌: 2ನೇ ಸುತ್ತಿಗೆ ನಡಾಲ್‌, ಸ್ವಿಯಾಟೆಕ್‌, ಎಮ್ಮಾ

ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ ವರ್ಷದ ವಿಂಬಲ್ಡನ್‌, ಯುಎಸ್‌ ಓಪನ್‌ ರನ್ನರ್‌-ಅಪ್‌, 2ನೇ ಶ್ರೇಯಾಂಕಿತೆ ಟ್ಯುನೀಶಿಯಾದ ಒನ್ಸ್‌ ಜಬುರ್‌ ಸ್ಲೊವೇನಿಯಾದ ಜಿದಾನ್‌ಸೆಕ್‌ ವಿರುದ್ಧ 7-6(10-8), 4-6, 6-1 ಸೆಟ್‌ಗಳ ಪ್ರಯಾಸದ ಗೆಲುವು ಸಾಧಿಸಿದರು. ಬೆಲಾರಸ್‌ನ ಅರೈನಾ ಸಬಲೆಂಕಾ ಕೂಡಾ 2ನೇ ಸುತ್ತು ಪ್ರವೇಶಿಸಿದರು.

ಜ.21, 22ಕ್ಕೆ ಕರ್ನಾಟಕ ಆರ್ಚರಿ ಚಾಂಪಿಯನ್‌ಶಿಪ್‌

ಬೆಂಗಳೂರು: ಕರ್ನಾಟಕ ಅಮೆಚೂರ್‌ ಆರ್ಚರಿ ಸಂಸ್ಥೆ 2023ರ ಕರ್ನಾಟಕ ರಾಜ್ಯ ಆರ್ಚರಿ ಚಾಂಪಿಯನ್‌ಶಿಪ್‌ ಜ.21, 22ರಂದು ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿದೆ. ಅಂಡರ್‌-14, ಅಂಡರ್‌-17 ಹಾಗೂ ಅಂಡರ್‌-20 ವಿಭಾಗದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಇಂಡಿಯನ್‌, ರೀಕರ್ವ್ ಹಾಗೂ ಕಾಂಪೌಂಡ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಆಸಕ್ತರು ಜನವರಿ 18ರ ಮೊದಲು ಕಂಠೀರವ ಕ್ರೀಡಾಂಗಣದಲ್ಲಿರುವ ಆರ್ಚರಿ ಸಂಸ್ಥೆ ಕಚೇರಿಯಲ್ಲಿ ಹೆಸರು ನೋಂದಾಯಿಸಲು ಸೂಚಿಸಲಾಗಿದೆ.

ಮಹಿಳಾ ಹಾಕಿ ಟೆಸ್ಟ್‌: ಭಾರತಕ್ಕೆ 5-1 ಗೆಲುವು

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡ 5-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಕಳೆದ ವರ್ಷ ಜೂನ್‌ ಬಳಿಕ ಮೊದಲ ಬಾರಿ ಭಾರತ ಪರ ಕಣಕ್ಕಿಳಿದ ರಾಣಿ ರಾಂಪಾಲ್‌ 12ನೇ ನಿಮಿಷದಲ್ಲಿ ಬಾರಿಸಿದ ಗೋಲು ತಂಡಕ್ಕೆ ಮುನ್ನಡೆ ಒದಗಿಸಿತು. ಬಳಿಕ 20ನೇ ನಿಮಿಷದಲ್ಲಿ ಮೋನಿಕಾ, 24ನೇ ನಿಮಿಷದಲ್ಲಿ ನವ್‌ನೀತ್‌ ಕೌರ್‌, 25ನೇ ನಿಮಿಷದಲ್ಲಿ ಗುರ್ಜಿತ್‌ ಕೌರ್‌, 30ನೇ ನಿಮಿಷದಲ್ಲಿ ಸಂಗೀತಾ ಕುಮಾರಿ ಗೋಲು ಬಾರಿಸಿದರು.