ಆಸ್ಪ್ರೇಲಿಯನ್ ಓಪನ್: 2ನೇ ಸುತ್ತಿಗೆ ನಡಾಲ್, ಸ್ವಿಯಾಟೆಕ್, ಎಮ್ಮಾ
ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ರಾಫೆಲ್ ನಡಾಲ್
23ನೇ ಟೆನಿಸ್ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಸ್ಪೇನ್ ಟೆನಿಸಿಗ
ಬ್ರಿಟನ್‌ನ ಜ್ಯಾಕ್ ಡ್ರೇಪರ್ ನಡಾಲ್ ಭರ್ಜರಿ ಜಯಭೇರಿ
ಮೆಲ್ಬರ್ನ್(ಜ.17): ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್ ಆಸ್ಪ್ರೇಲಿಯನ್ ಓಪನ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಸೋಮವಾರ ಆರಂಭಗೊಂಡ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ನಂ.1 ಶ್ರೇಯಾಂಕಿತ ನಡಾಲ್, ಬ್ರಿಟನ್‌ನ ಜ್ಯಾಕ್ ಡ್ರೇಪರ್ ವಿರುದ್ಧ 4 ಸೆಟ್‌ಗಳ (7-5, 2-6, 6-4, 6-1) ಜಯಗಳಿಸಿದರು.
ಮೊದಲ ಸುತ್ತಿನಲ್ಲೇ ದಣಿವಾದಂತೆ ಕಂಡ ನಡಾಲ್‌ಗೆ ಜ್ಯಾಕ್ 3ನೇ ಸುತ್ತಿನವರೆಗೂ ಪ್ರಬಲ ಪೋಪೋಟಿ ನೀಡಿದರು. ಆದರೆ ಪಂದ್ಯ ತನ್ನದಾಗಿಸಿಕೊಳ್ಳಲು ನಡಾಲ್ ಯಶಸ್ವಿಯಾದರು. ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಜರ್ಮನಿಯ ಜೂಲ್ ನೀಮಿಯರ್ ವಿರುದ್ಧ 6-4, 7-5 ನೇರ ಸೆಟ್‌ಗಳಿಂದ ಜಯ ಸಾಧಿಸಿದರೆ, ಬ್ರಿಟನ್‌ನ ಎಮ್ಮಾ ರಾಡುಕಾನು ಜರ್ಮನಿಯ ತಮಾರ ಕೊರ್ಪಾ್ಯಟ್ಶ್ ವಿರುದ್ಧ 6-3, 6-2ರ ಸುಲಭ ಜಯ ದಾಖಲಿಸಿದರು.
ಇಂದಿನಿಂದ ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ನಿರೀಕ್ಷೆಯಲ್ಲಿ ಸಿಂಧು, ಲಕ್ಷ್ಯ
ನವದೆಹಲಿ: ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ನವದೆಹಲಿಯಲ್ಲಿ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಲಕ್ಷ್ಯ ಸೇನ್, ಮಾಜಿ ಚಾಂಪಿಯನ್ ಪಿ.ವಿ.ಸಿಂಧು ಸೇರಿದಂತೆ ಭಾರತೀಯ ಶಟ್ಲರ್‌ಗಳು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಲ್ಲಿ ಸೇನ್‌ಗೆ ವಿಶ್ವ ನಂ.8, ಭಾರತದವರೇ ಆದ ಎಚ್.ಎಸ್.ಪ್ರಣಯ್ ಸವಾಲು ಎದುರಾಗಲಿದೆ. ಕಳೆದ ವಾರ ಮಲೇಷ್ಯಾ ಓಪನ್‌ನಲ್ಲೂ ಇವರಿಬ್ಬರು ಆರಂಭಿಕ ಸುತ್ತಲ್ಲಿ ಪರಸ್ಪರ ಮುಖಾಮುಖಿಯಾಗಿದ್ದರು. ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಹಾಲಿ ವಿಶ್ವ ನಂ.1 ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೆಣಸಲಿದ್ದಾರೆ.
Women's IPL: ವೈಕೋಮ್18 ಪಾಲಾದ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು..! ಪ್ರತಿ ಪಂದ್ಯಕ್ಕೆ 7.09 ಕೋಟಿ..!
ಮಹಿಳಾ ಸಿಂಗಲ್ಸ್‌ನಲ್ಲಿ 2010, 2015ರ ಚಾಂಪಿಯನ್ ಸೈನಾ ನೆಹ್ವಾಲ್, 2017ರಲ್ಲಿ ಪ್ರಶಸ್ತಿ ಗೆದ್ದಿದ್ದ ಸಿಂಧು ಜೊತೆ ಆಕರ್ಷಿ ಕಶ್ಯಪ್, ಮಾಳವಿಕಾ ಬನ್ಸೋದ್ ಕೂಡಾ ಕಣಕ್ಕಿಳಿಯಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಭೂತಪೂರ್ವ ಲಯದಲ್ಲಿರುವ ತಾರಾ ಪುರುಷ ಡಬಲ್ಸ್ ಜೋಡಿ, ವಿಶ್ವ ನಂ.5 ಸಾತ್ವಿಕ್-ಚಿರಾಗ್ ಶೆಟ್ಟಿಸತತ 2ನೇ ಇಂಡಿಯಾ ಓಪನ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಮೊದಲ ವಿಕೆಟ್‌ಗೆ 549 ರನ್ ಜೊತೆಯಾಟ: ಬೆಂಗ್ಳೂರು ಹುಡುಗರ ವಿಶ್ವದಾಖಲೆ!
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ನಡೆಸುವ ಬಿ.ಟಿ.ರಾಮಯ್ಯ ಅಂತರ ಶಾಲಾ ಅಂಡರ್-14 ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರಿನ ಗೋಪಾಲನ್ ಶಾಲೆಯ ಅರವಿಂದ್ ಹಾಗೂ ಸಾಯಿವರುಣ್ ಮೊದಲ ವಿಕೆಟ್‌ಗೆ 549 ರನ್ ಜೊತೆಯಾಟವಾಡಿ ವಿಶ್ವ ದಾಖಲೆ ಬರೆದಿದ್ದಾರೆ.
ನಗರದ ಬಿಇಎಲ್ ಮೈದಾನದಲ್ಲಿ ಸೋಮವಾರ ವಿದ್ಯಾನಿಕೇತನ ಶಾಲೆ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಈ ಜೋಡಿ 50 ಓವರಲ್ಲಿ 549 ರನ್ ಕಲೆ ಹಾಕಿತು. ಇದರೊಂದಿಗೆ 2016ರಲ್ಲಿ ಮುಂಬೈನ ಕೆ.ಜಿ.ಗಾಂಧಿ ಇಂಗ್ಲಿಷ್ ಶಾಲೆಯ ಆಕಾಶ್ ಸಿಂಗ್-ಪ್ರಣವ್ ಧನವಾಡೆ ಮೊದಲ ವಿಕೆಟ್‌ಗೆ ಗಳಿಸಿದ್ದ 546 ರನ್‌ಗಳ ವಿಶ್ವದಾಖಲೆ ಮುರಿಯಿತು. ಪಂದ್ಯದಲ್ಲಿ ಅರವಿಂದ್ 159 ಎಸೆತಗಳಲ್ಲಿ 277 ರನ್ ಸಿಡಿಸಿದರೆ, ಸಾಯಿವರುಣ್ 147 ಎಸೆತಗಳಲ್ಲಿ 247 ರನ್ ಗಳಿಸಿದರು. ವಿದ್ಯಾನಿಕೇತನ ಶಾಲೆ ಕೇವಲ 63 ರನ್‌ಗೆ ಆಲೌಟ್ ಆಯಿತು.