ಕೋವಿಡ್ ಹೋರಾಟಕ್ಕೆ 45 ಕೋಟಿ ರೂ ದೇಣಿಗೆ ನೀಡಿದ ಆರ್‌ಸಿಬಿ
* ದೇಶದ ಕೋವಿಡ್ 19 ವಿರುದ್ದದ ಹೋರಾಟಕ್ಕೆ ಕೈ ಜೋಡಿಸಿದ ಆರ್‌ಸಿಬಿ
* ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ 45 ಕೋಟಿ ರುಪಾಯಿ ದೇಣಿಗೆ
* ದೇಶ ಸಂಕಷ್ಟದಲ್ಲಿರುವಾಗ ನೆರವಾಗಿ ತನ್ನ ಬದ್ದತೆ ಪ್ರದರ್ಶಿಸಿದ ಆರ್‌ಸಿಬಿ
ಬೆಂಗಳೂರು(ಮೇ.24): ಕೋವಿಡ್ ಎರಡನೇ ಅಲೆಯ ಅಬ್ಬರಕ್ಕೆ ದೇಶದಾದ್ಯಂತ ಅಪಾರ ಸಾವು-ನೋವು ಸಂಭವಿಸಿದೆ. ಒಂದು ಕಡೆ ಪ್ರತಿನಿತ್ಯ ಲಕ್ಷಾಂತರ ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಮತ್ತೊಂದು ಕಡೆ ಸಾವಿರಾರು ಸಾವುಗಳು ಸಂಭವಿಸುತ್ತಿವೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಸುದೈವ ಎನ್ನುವಂತೆ ಈಗಾಗಲೇ ಹಲವು ಸಂಸ್ಥೆಗಳು, ಪ್ರಮುಖ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ಕೋವಿಡ್ 19 ವಿರುದ್ದ ಹೋರಾಟಕ್ಕೆ ಧುಮುಕಿದ್ದಾರೆ. ಇದೀಗ ಐಪಿಎಲ್‌ನ ಬೆಂಗಳೂರು ಮೂಲದ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡಾ ಆರ್ಥಿಕ ನೆರವು ನೀಡುವ ಮೂಲಕ ಕೋವಿಡ್ ವಿರುದ್ದದ ದೇಶದ ಹೋರಾಟಕ್ಕೆ ಕೈಜೋಡಿಸಿದೆ.
ಆರ್‌ಸಿಬಿ ಮಾತೃಸಂಸ್ಥೆಯಾದ ಡೈಜಿಯೊ 45 ಕೋಟಿ ರುಪಾಯಿ ದೇಣಿಗೆ ನೀಡಿದ್ದು, ದೇಶದ ಪ್ರತಿ ರಾಜ್ಯದ ಒಂದು ಜಿಲ್ಲೆ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸಲು ಮುಂದಾಗಿದೆ. ಬೆಂಗಳೂರು ಮೂಲದ ಫ್ರಾಂಚೈಸಿ 21 ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನು ತೆರೆಯಲು ತೀರ್ಮಾನಿಸಿದೆ. ಇದಷ್ಟೇ ಅಲ್ಲದೇ ಮತ್ತೆ 15 ನಗರಗಳಲ್ಲಿ 16 ಬೆಡ್‌ಗಳಿರುವ ಮಿನಿ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿದೆ.
ದೇಶ ಈ ಸಂದರ್ಭದಲ್ಲಿ ಎದುರಿಸುತ್ತಿರುವ ಮಾನವೀಯ ಸಂಕಷ್ಟದ ಸಂದರ್ಭದಲ್ಲಿ ನಾವು ಸರ್ಕಾರದ ಕೆಲಸವನ್ನು ಬೆಂಬಲಿಸುತ್ತೇವೆ ಹಾಗೂ ದೇಶದ ಜನರ ಜತೆ ನಿಲ್ಲುತ್ತೇವೆ. ದೀರ್ಘಕಾಲಿಕವಾಗಿ ಬಾಳಿಕೆ ಬರುವ ಮೂಲ ಸೌಕರ್ಯಗಳು, ಅದರಲ್ಲೂ ಬಹುಮುಖ್ಯವಾಗಿ ಆಸ್ಪತ್ರೆ ಬೆಡ್‌ಗಳ ವ್ಯವಸ್ಥೆ ಹಾಗೂ ಅತ್ಯಗತ್ಯವಾಗಿ ಅವಶ್ಯವಿರುವ ಆಕ್ಸಿಜನ್ ಪೂರೈಸುವುದನ್ನು ನಾವು ಎದುರು ನೋಡುತ್ತಿದ್ದೇವೆ. ನಾವು ನೀಡಿರುವ ದೇಣಿಗೆ ಹಣವು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪುವ ಮೂಲಕ ದೇಶ ಚೇತರಿಸಿಕೊಳ್ಳಲು ನೆರವಾಗಲಿದೆ ಎಂದು ಡೈಜಿಯೊ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಕೃಪಾಲು ತಿಳಿಸಿದ್ದಾರೆ.
ದೇಶ ಎದುರಿಸುತ್ತಿರುವ ಕೋವಿಡ್ ಸಂಕಷ್ಟಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ವೈಯುಕ್ತಿಕವಾಗಿ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದರು. ಇನ್ನು ಕೆಟ್ಟೋ ಸಹಭಾಗಿತ್ವದಲ್ಲಿ ಒಂದು ವಾರದ ಅವಧಿಯಲ್ಲಿ 11 ಕೋಟಿ ರುಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸಿದ್ದರು. ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಪಠಾಣ್ ಬ್ರದರ್ಸ್ ಹಾಗೂ ಪಾಂಡ್ಯ ಬ್ರದರ್ಸ್ ಸೇರಿದಂತೆ ಹಲವು ಕ್ರೀಡಾತಾರೆಯಲು ಈ ಸಂಕಷ್ಟದ ಸಂದರ್ಭದಲ್ಲಿ ದೇಶದ ಬೆನ್ನಿಗೆ ನಿಂತಿದ್ದಾರೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನ ತೋರಿತ್ತು. ಆಡಿದ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಹಾಗೂ 2 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿತ್ತು. ಹೀಗಿರುವಾಗಲೇ ಬಯೋ ಬಬಲ್‌ನಲ್ಲಿ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಮೇ.04ರಂದು ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona