ಎರಡನೇ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದ್ದರೂ, ಮಳೆಯಿಂದಾಗಿ ಪಂದ್ಯ ಡ್ರಾ ಆಗುವ ಸಾಧ್ಯತೆ. ಗೆಲ್ಲಲು ಇಂಗ್ಲೆಂಡ್‌ಗೆ ಇನ್ನೂ 536 ರನ್‌ಗಳ ಅಗತ್ಯವಿದ್ದು, ಭಾರತಕ್ಕೆ 7 ವಿಕೆಟ್ ಬೇಕು. ಕೊನೆಯ ದಿನದಾಟಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.
ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎಜ್‌ಬಾಸ್ಟನ್ ಟೆಸ್ಟ್ ಪಂದ್ಯವು ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ್ದು, ಈ ಸ್ಟೇಡಿಯಂನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯ ಗೆಲ್ಲಲು ಎದುರು ನೋಡುತ್ತಿದೆ. ಗೆಲ್ಲಲು 608 ರನ್ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 72 ರನ್ ಗಳಿಸಿದೆ. ಎರಡನೇ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌ಗೆ ಇನ್ನೂ 536 ರನ್‌ಗಳ ಅಗತ್ಯವಿದೆ. ಇನ್ನೊಂದೆಡೆ ಕಳೆದ 58 ವರ್ಷಗಳಿಂದ ಈ ಸ್ಟೇಡಿಯಂನಲ್ಲಿ ಕೆಲವು ಪಂದ್ಯವನ್ನಾಡಿದರೂ ಗೆಲ್ಲಲು ವಿಫಲವಾಗಿರುವ ಟೀಂ ಇಂಡಿಯಾ, ಕೊನೆಯ ದಿನದಾಟದಲ್ಲಿ 7 ವಿಕೆಟ್ ಕಬಳಿಸಿದರೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ಟೆಸ್ಟ್ ಗೆಲುವಿನ ಬರ ನೀಗಿಸಿಕೊಳ್ಳಲಿದೆ. ಇನ್ನು ಇದೆಲ್ಲದರ ನಡುವೆ ಕೊನೆಯ ದಿನದಾಟಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದ್ದು, ಎಜ್‌ಬಾಸ್ಟನ್ ಟೆಸ್ಟ್ ಗೆಲುವು ಭಾರತದ ಪಾಲಿಗೆ ಮರಿಚಿಕೆಯಾಗಿಯೇ ಉಳಿಯುವ ಸಾಧ್ಯತೆ ದಟ್ಟವಾಗಿದೆ.
ಸದ್ಯಕ್ಕಂತೂ ಟೀಂ ಇಂಡಿಯಾ, ಎರಡನೇ ಟೆಸ್ಟ್‌ನಲ್ಲಿ ಡ್ರೈವರ್ ಸೀಟ್‌ನಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ದ್ವಿಶತಕದ ನೆರವಿನಿಂದ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇನ್ನು ಇಂಗ್ಲೆಂಡ್ ತಂಡವು ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ 407 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ವಪತನ ಕಂಡಿತು. ಸಿರಾಜ್ ಆರು ವಿಕೆಟ್ ಕಬಳಿಸಿ ಮಿಂಚಿದರೆ, ಭಾರತ 180 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಇನ್ನು ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್ ಬಾರಿಸಿದ ಮತ್ತೊಂದು ಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇನ್ನು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್‌ನ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಎಜ್‌ಬಾಸ್ಟನ್ ಟೆಸ್ಟ್ ಗೆಲುವಿನ ಕನಸು ಕಾಣುತ್ತಿದೆ.
ಇಂದು ಮುಂಜಾನೆ 6 ಗಂಟೆಗೆ ಸ್ಟೇಡಿಯಂ ಸುತ್ತಮುತ್ತ ಮಳೆಯಾಗಿತ್ತು. ಇನ್ನು ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಇರುವಾಗ ಕಪ್ಪು ಮೋಡಗಳು ದಟ್ಟವಾಗಿ ಕವಿದಿದೆ. ಭಾನುವಾರವಾದ ಇಂದು ಹವಾಮಾನ ವರದಿಯ ಪ್ರಕಾರ 60% ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾಗಿ ಪಂದ್ಯ ಕೊಂಚ ತಡವಾಗಿ ಆರಂಭವಾಗುವ ಸಾಧ್ಯತೆಯಿದೆ. ಕೆಲವ ಮಾಧ್ಯಮಗಳ ವರದಿಯ ಪ್ರಕಾರ ಹವಾಮಾನ ವರದಿ ಸರಿಯಾಗಿಯೇ ಪ್ರೆಡಿಕ್ಟ್ ಮಾಡಿದರೆ, ಇಂದು ಅಲ್ಲಿಯ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯವರೆಗೂ ಮಳೆಯಾಗುವ ಸಾಧ್ಯತೆಯಿದೆ.
ಒಂದು ವೇಳೆ ಭಾರೀ ಮಳೆಯಾದರೇ, ಕೊನೆಯ ದಿನವಾದ ಇಂದು ಪಂದ್ಯ ನಡೆಯುವ ಸಾಧ್ಯತೆ ಕಷ್ಟವಾಗಲಿದೆ. ಹೀಗಾದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಸೋಲಿನಿಂದ ಪಾರಾಗುವುದರ ಜತೆಗೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲಿದೆ. ಎಜ್‌ಬಾಸ್ಟನ್‌ನ ಈ ಟ್ರಿಕ್ಕಿ ಪಿಚ್‌ನಲ್ಲಿ ಕೊನೆಯ ದಿನ 7 ವಿಕೆಟ್ ಕಬಳಿಸುವುದು ಅಷ್ಟು ಸುಲಭವಲ್ಲ.
ಎಜ್‌ಬಾಸ್ಟನ್‌ನಲ್ಲಿ ಹವಾಮಾನ ವರದಿ
ಸಮಯ - ಮಳೆ ಸಾಧ್ಯತೆ
9:00 AM - 90%
10:00 AM - 60%
11:00 AM - 46%
12:00 PM - 46%
1:00 PM - 47%
2:00 PM - 20 %
3:00 PM - 13%
4:00 PM - 0%
5:00 PM - 0%


