ಆಂಡರ್ಸನ್-ತೆಂಡುಲ್ಕರ್ ಟ್ರೋಫಿಯ ಕೊನೆಯ ಟೆಸ್ಟ್‌ನಲ್ಲಿ ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡ ಹೊಸ ಸವಾಲುಗಳನ್ನು ಎದುರಿಸಲಿದೆ. ಕುಲ್ದೀಪ್ ಯಾದವ್, ಆಕಾಶ್‌ದೀಪ್ ಮತ್ತು ಅರ್ಶದೀಪ್ ಸಿಂಗ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಇದೇ ಜುಲೈ 31ರಿಂದ ಇಲ್ಲಿನ ದಿ ಓವಲ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯವು ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ನಿರ್ಣಾಯಕ ಎನಿಸಿಕೊಳ್ಳಲಿದೆ. ಸದ್ಯ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಆತಿಥೇಯ ಇಂಗ್ಲೆಂಡ್ ತಂಡವು 2-1ರ ಮುನ್ನಡೆ ಸಾಧಿಸಿದ್ದು, ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅಥವಾ ಡ್ರಾ ಮಾಡಿಕೊಂಡರೂ ಟೆಸ್ಟ್ ಸರಣಿ ಇಂಗ್ಲೆಂಡ್ ಪಾಲಾಗಲಿದೆ.
ಇನ್ನೊಂದೆಡೆ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾ, ಕೊನೆಯ ಟೆಸ್ಟ್ ಪಂದ್ಯವನ್ನು ಜಯಿಸಿ ಸರಣಿಯನ್ನು 2-2ರೊಂದಿಗೆ ಸಮಗೊಳಿಸಿ ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಶುಭ್‌ಮನ್ ಗಿಲ್ ಪಡೆ ಎದುರು ನೋಡುತ್ತಿದೆ. ಹೀಗಾಗಿ ಭಾರತ ಮುಂದಿರುವ ದೊಡ್ಡ ಸವಾಲು ಎಂದರೆ, ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಯಾವ ಕಾಂಬಿನೇಷನ್‌ನಲ್ಲಿ ಕಣಕ್ಕಿಳಿಯಲಿದೆ ಎನ್ನುವುದು. ಯಾಕೆಂದರೆ ಈಗಾಗಲೇ ತಂಡದ ಉಪನಾಯಕ ಹಾಗೂ ಇನ್‌ಫಾರ್ಮ್ ವಿಕೆಟ್ ಕೀಪರ್ ಬ್ಯಾಟರ ರಿಷಭ್ ಪಂತ್ ಗಾಯದ ಸಮಸ್ಯೆಯಿಂದಾಗಿ ಕೊನೆಯ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಇದರ ಜತೆಗೆ ತಂಡದ ವೇಗದ ಅಸ್ತ್ರ ಜಸ್ಪ್ರೀತ್ ಬುಮ್ರಾ ಕೂಡಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನಿಸಿದೆ. ಇದರ ಬೆನ್ನಲ್ಲೇ ಭಾರತದ ಆಡುವ ಹನ್ನೊಂದರ ಬಳಗದ ಬಗ್ಗೆ ಮಹತ್ವದ ಅಪ್‌ಡೇಟ್ಸ್ ಹೊರಬಿದ್ದಿದೆ.
ಈ ಮೂವರು ಆಟಗಾರರಿಗೆ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ!
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದ ಏಕೈಕ ತಜ್ಞ ಸ್ಪಿನ್ನರ್ ಎಂದರೆ ಅದು ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್. ಆದರೆ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕುಲ್ದೀಪ್ ಯಾದವ್ ಬೆಂಚ್ ಕಾಯಿಸಿದ್ದರು. ಈ ಕುರಿತಂತೆ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಅವರ ಮೇಲೆ ಪ್ರಶ್ನೆಗಳು ಏಳಲಾರಂಭಿಸಿವೆ. ಇದೀಗ ಬಂದ ಮಾಧ್ಯಮಗಳ ವರದಿಯ ಪ್ರಕಾರ ಕೊನೆಯ ಟೆಸ್ಟ್‌ನಲ್ಲಿ ಕುಲ್ದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ವೇಗಿ ಆಕಾಶ್‌ದೀಪ್ ಕೂಡಾ ಭಾರತ ತಂಡದೊಳಗೆ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿಯಲು ತೀರ್ಮಾನಿಸಿದರೆ, ಎಡಗೈ ವೇಗಿ ಅರ್ಶದೀಪ್ ಸಿಂಗ್ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ರಿಷಭ್ ಪಂತ್ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಹಿನ್ನಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಧ್ರುವ್ ಜುರೆಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನುಳಿದಂತೆ ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಮ್ಯಾಂಚೆಸ್ಟರ್ ಟೆಸ್ಟ್ ಡ್ರಾನಲ್ಲಿ ಅಂತ್ಯ:
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದೆ. ಟಾಸ್ ಸೋತು ಬ್ಯಾಟ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 311 ರನ್‌ಗಳ ಬೃಹತ್ ಮುನ್ನಡೆ ಸಂಪಾದಿಸಿತು. ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ, ಆರಂಭಿಕ ಆಘಾತದ ಹೊರತಾಗಿಯೂ 4 ವಿಕೆಟ್ ಕಳೆದುಕೊಂಡು 425 ರನ್ ಬಾರಿಸಿತು. ಅಂತಿಮವಾಗಿ ಮ್ಯಾಂಚೆಸ್ಟರ್ ಟೆಸ್ಟ್ ಡ್ರಾನಲ್ಲಿ ಅಂತ್ಯವಾಯಿತು.
