Asianet Suvarna News Asianet Suvarna News

ವಿಂಡೀಸ್ ಎದುರು ಜಯಭೇರಿ, ICC ODI Rankings ಭಾರತಕ್ಕೆ ಜಾಕ್‌ಪಾಟ್

ವೆಸ್ಟ್ ಇಂಡೀಸ್ ಎದುರು ಏಕದಿನ ಕ್ರಿಕೆಟ್ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಂ ಇಂಡಿಯಾ
ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡ ಭಾರತ
ಕಳೆದ 9 ಏಕದಿನ ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿರುವ ಟೀಂ ಇಂಡಿಯಾ

India consolidate 3rd spot in ICC ODI Rankings after Clean Sweep ODI series against West Indies kvn
Author
Bengaluru, First Published Jul 28, 2022, 5:53 PM IST

ದುಬೈ(ಜು.28): ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ 3 ಪಂದ್ಯಗಳನ್ನು ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ನೂತನವಾಗಿ ಬಿಡುಗಡೆಯಾದ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಹಲವು ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ವಿಂಡೀಸ್ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್ ನೇತೃತ್ವದ ಭಾರತ ಕ್ರಿಕೆಟ್‌ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಸರಣಿ ಕ್ಲೀನ್‌ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾಗೆ ಜಾಕ್‌ಪಾಟ್ ಹೊಡೆದಿದೆ.

ಭಾರತ ಕ್ರಿಕೆಟ್‌ ತಂಡವು ತನ್ನ ಅದ್ಭುತ ಪ್ರದರ್ಶನದ ನೆರವಿನಿಂದ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕಿಂತ 4 ಅಂಕಗಳ ಮುನ್ನಡೆ ಕಾಯ್ದುಕೊಂಡು ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ಸದ್ಯ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ ಮೊದಲೆರಡು ಸ್ಥಾನಗಳಲ್ಲಿ ಭದ್ರವಾಗಿವೆ. ಇನ್ನು ಸತತ 9 ಏಕದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 9ನೇ ಸ್ಥಾನಕ್ಕೆ ಜಾರಿದೆ.

ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ 128 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಭದ್ರವಾಗಿದ್ದರೇ, 119 ರೇಟಿಂಗ್ ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ತಂಡವು ಎರಡನೇ ಸ್ಥಾನದಲ್ಲಿಯೇ ಭದ್ರವಾಗಿದೆ. ಇನ್ನು ಟೀಂ ಇಂಡಿಯಾ ಈ ವರ್ಷಾರಂಭವನ್ನು ದಕ್ಷಿಣ ಆಫ್ರಿಕಾ ಎದುರು ಏಕದಿನ ಸರಣಿ ಸೋಲಿನೊಂದಿಗೆ ಆರಂಭಿಸಿತ್ತು. ಇದಾದ ಬಳಿಕ ಫಿನಿಕ್ಸ್‌ನಂತೆ ಎದ್ದು ಬಂದಿರುವಂತೆ ಕಾಣುತ್ತಿರುವ ಟೀಂ ಇಂಡಿಯಾ, ಸತತ ಮೂರು ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 

Ind vs WI 'ನಮ್ಮ ಹುಡುಗರು ಯುವಕರು, ಆದರೆ..' ಸರಣಿ ಗೆಲುವಿನ ಬಳಿಕ ನಾಯಕ ಧವನ್ ಹೇಳಿದ್ದಿದು..!

ಭಾರತ ಕ್ರಿಕೆಟ್ ತಂಡವು ಮೊದಲಿಗೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಭರ್ಜರಿ ಸರಣಿ ಜಯ ದಾಖಲಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ, ಇಂಗ್ಲೆಂಡ್‌ ತಂಡವನ್ನು ಇಂಗ್ಲೆಂಡ್ ನೆಲದಲ್ಲಿಯೇ ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ಭಾರತ ಕ್ರಿಕೆಟ್ ತಂಡವು ಗೆಲುವಿನ ನಗೆ ಬೀರಿದೆ. ಟೀಂ ಇಂಡಿಯಾ ತಾನಾಡಿದ ಕೊನೆಯ 9 ಏಕದಿನ ಪಂದ್ಯಗಳ ಪೈಕಿ 8 ಏಕದಿನ ಪಂದ್ಯಗಳಲ್ಲಿ ಗೆಲುವಿನ ಕೇಕೆ ಹಾಕಿದೆ. ಇನ್ನು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಏಕದಿನ ರ‍್ಯಾಂಕಿಂಗ್‌‌: ಶುಭ್‌ಮನ್‌ ಗಿಲ್‌ 20 ಸ್ಥಾನ ಏರಿಕೆ

ದುಬೈ: ಭಾರತೀಯ ಕ್ರಿಕೆಟಿಗರಾದ ಶಿಖರ್‌ ಧವನ್‌ ಮತ್ತು ಶುಭ್‌ಮನ್‌ ಗಿಲ್‌ ಬುಧವಾರ ಪ್ರಕಟಗೊಂಡ ಐಸಿಸಿ ನೂತನ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಧವನ್‌ ಜಂಟಿ 13ನೇ ಸ್ಥಾನ ಪಡೆದಿದ್ದು, ಗಿಲ್‌ 20 ಸ್ಥಾನಗಳ ಏರಿಕೆ ಕಂಡು ಜಂಟಿ 54ನೇ ಸ್ಥಾನ ಪಡೆದಿದ್ದಾರೆ. ವಿಂಡೀಸ್‌ ವಿರುದ್ಧ ಮೊದಲ ಮತ್ತು 2ನೇ ಏಕದಿನ ಪಂದ್ಯಗಳಲ್ಲಿ ಗಿಲ್‌ ಕ್ರಮವಾಗಿ 54 ಮತ್ತು 63ನೇ ಸ್ಥಾನ ಪಡೆದಿದ್ದರು. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ತಲಾ ಒಂದು ಸ್ಥಾನ ಕುಸಿತ ಕಂಡಿದ್ದು ಕ್ರಮವಾಗಿ 5ನೇ ಮತ್ತು 6ನೇ ಸ್ಥಾನ ಪಡೆದಿದ್ದಾರೆ. ಇನ್ನು ಪಾಕಿಸ್ತಾನದ ನಾಯಕ ಬಾಬರ್‌ ಆಜಂ ಟೆಸ್ಟ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಏಕದಿನ, ಟಿ20 ಪಟ್ಟಿಯಲ್ಲಿ ಬಾಬರ್‌ ಮೊದಲ ಸ್ಥಾನದಲ್ಲಿದ್ದಾರೆ.

Follow Us:
Download App:
  • android
  • ios