ಉದಯೋನ್ಮುಖ ಏಷ್ಯಾಕಪ್ ಫೈನಲ್ ಗೆದ್ದ ಭಾರತ; ಪಂದ್ಯ ಗೆಲ್ಲಿಸಿದ ಆರ್‌ಸಿಬಿ ಆಟಗಾರ್ತಿಯರು..!
ಉದಯೋನ್ಮುಖ ಏಷ್ಯಾಕಪ್ ಫೈನಲ್ ಗೆದ್ದ ಭಾರತ ಮಹಿಳಾ ತಂಡ
ಮಿಂಚಿನ ಪ್ರದರ್ಶನ ತೋರಿದ ಕನ್ನಡತಿ ಶ್ರೇಯಾಂಕ ಪಾಟೀಲ್
ಭಾರತ ತಂಡವನ್ನು ಗೆಲ್ಲಿಸಿದ ಆರ್‌ಸಿಬಿ ಆಟಗಾರ್ತಿಯರು
ಹಾಂಕಾಂಗ್(ಜೂ.21): ಕನ್ನಡತಿ ಶ್ರೇಯಾಂಕ ಪಾಟೀಲ್ ಮಾರಕ ಬೌಲಿಂಗ್(13/4) ಹಾಗೂ ಕನಿಕಾ ಅಹುಜಾ ಅವರ ಅದ್ಭುತ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಉದಯೋನ್ಮುಖ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ 'ಎ' ತಂಡದ ವಿರುದ್ದ ಭಾರತ 'ಎ' ಮಹಿಳಾ ತಂಡವು 31 ರನ್ ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾರತ ತಂಡದ ಗೆಲುವಿನಲ್ಲಿ ಆರ್‌ಸಿಬಿ ತಂಡದ ಆಟಗಾರ್ತಿಯರು ಪ್ರಮುಖ ಪಾತ್ರ ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಹಾಂಗ್ ಕಾಕ್ ಸಮೀಪದ ಮಿಷನ್ ರೋಡ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಭಾರತ ತಂಡದ ಪರ ಅಗ್ರಕ್ರಮಾಂಕದಲ್ಲಿ ನಾಯಕಿ ಶ್ವೇತಾ ಶೆರಾವತ್ 13 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಉಮಾ ಚೆಟ್ರಿ 20 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.'
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವ್ರಿಂದ ದಿನೇಶ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ವ್ರಿಂದ 29 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 36 ರನ್ ಗಳಿಸಿ ಮಿಂಚಿದರು. ಇದಾದ ಬಳಿಕ ಭಾರತ 'ಎ' ತಂಡವು ನಾಟಕೀಯ ಕುಸಿತ ಕಂಡಿತು. ಇದರ ನಡುವೆ ಆರ್‌ಸಿಬಿ ತಂಡದ ಪ್ರತಿಭಾನ್ವಿತ ಆಲ್ರೌಂಡರ್ ಕನಿಕಾ ಅಹುಜಾ ಕೇವಲ 23 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 30 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್ ಕಲೆಹಾಕಿತು.
ICC Test Rankings: ಲಬುಶೇನ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಜೋ ರೂಟ್..!
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಆರಂಭದಲ್ಲೇ ದಿಲ್ಹಾರ ಅಖ್ತರ್(5) ಬಲಿ ಪಡೆಯುವಲ್ಲಿ ಮನ್ನತ್ ಕಶ್ಯಪ್ ಯಶಸ್ವಿಯಾದರು. ಇನ್ನು ಸತಿ ರಾಣಾ ಕೂಡಾ(13) ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಮನ್ನತ್ ಕಶ್ಯಪ್ ಅವಕಾಶ ನೀಡಲಿಲ್ಲ.. ಇನ್ನು ಕನಿಕಾ ಅಹುಜಾ ಕೂಡಾ ಮಾರಕ ದಾಳಿ ನಡೆಸಿದರು. ಮನ್ನತ್ ಕಶ್ಯಪ್ 20 ರನ್ ನೀಡಿ 3 ವಿಕೆಟ್ ಪಡೆದರೆ, ಕನ್ನಡತಿ ಶ್ರೇಯಾಂಕ ಪಾಟೀಲ್ ಕೇವಲ 13 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ತಂಡವನ್ನು 96 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸುವಲ್ಲಿ ಯಶಸ್ವಿಯಾದರು.
ಟೂರ್ನಿಯಲ್ಲಿ ಮಾರಕ ದಾಳಿ ನಡೆಸಿದ ಶ್ರೇಯಾಂಕ ಪಾಟೀಲ್ ಎರಡು ಪಂದ್ಯಗಳಿಂದ 9 ವಿಕೆಟ್ ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ಕೇವಲ 2 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇನ್ನು ಫೈನಲ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ ಕನಿಕಾ ಅಹುಜಾ ಪಂದ್ಯಶ್ರೇಷ್ಠ ತಮ್ಮದಾಗಿಸಿಕೊಂಡರು.