Asianet Suvarna News Asianet Suvarna News

ICC Test Rankings: ಲಬುಶೇನ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಜೋ ರೂಟ್‌..!

ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ
ಲಬುಶೇನ್‌ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಜೋ ರೂಟ್
ರಿಷಭ್ ಪಂತ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ

ICC Test Rankings Joe Root dethrones Marnus Labuschagne to become new No 1 kvn
Author
First Published Jun 21, 2023, 4:25 PM IST

ದುಬೈ(ಜೂ.21): ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌‌ ಪ್ರಕಟವಾಗಿದ್ದು, ಬ್ಯಾಟರ್‌ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ನಂ.1 ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್‌ ಮೊದಲ ಇನಿಂಗ್ಸ್‌ನಲ್ಲಿ ಅಜೇಯ ಶತಕ ಸಿಡಿಸಿ ಮಿಂಚಿದ್ದರು. ಇದೀಗ ಬರೋಬ್ಬರಿ 6 ತಿಂಗಳಿನಿಂದ ಟೆಸ್ಟ್ ಬ್ಯಾಟರ್‌ಗಳಲ್ಲಿ ನಂ.1 ಸ್ಥಾನದಲ್ಲಿ ಭದ್ರವಾಗಿದ್ದ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಅವರನ್ನು ಹಿಂದಿಕ್ಕಿ ಜೋ ರೂಟ್ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್‌, ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಜೋ ರೂಟ್ ಅಜೇಯ 118 ರನ್‌ ಬಾರಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ರೂಟ್ ಚುರುಕಿನ 46 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಜೋ ರೂಟ್ ಅದ್ಭುತ ಬ್ಯಾಟಿಂಗ್‌ನ ಹೊರತಾಗಿಯೂ ಇಂಗ್ಲೆಂಡ್ ಎದುರು ಎಜ್‌ಬಾಸ್ಟನ್ ಟೆಸ್ಟ್‌ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡವು 2 ವಿಕೆಟ್ ರೋಚಕ ಜಯ ಸಾಧಿಸಿತ್ತು.

ಇಂಗ್ಲೆಂಡ್ ತಂಡದ ಸೋಲಿಗೆ ನಾಯಕ ಬೆನ್ ಸ್ಟೋಕ್ಸ್‌ ಹಾಗೂ ಹೆಡ್‌ ಕೋಚ್ ಬ್ರೆಂಡನ್ ಮೆಕ್ಕಲಂ ಅವರ ಬಾಜ್‌ಬಾಲ್‌ ರಣತಂತ್ರವೇ ಕಾರಣ ಎನ್ನುವಂತಹ ಚರ್ಚೆ ಜೋರಾಗಿದೆ. ಇದರ ಹೊರತಾಗಿಯೂ ಆಕರ್ಷಕ ಬ್ಯಾಟಿಂಗ್ ನಡೆಸಿದ ಜೋ ರೂಟ್‌ ಇದೀಗ 887 ರೇಟಿಂಗ್ ಅಂಕ ಕಲೆಹಾಕುವ ಮೂಲಕ ಟೆಸ್ಟ್ ರ‍್ಯಾಂಕಿಂಗ್‌‌ನಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿಯೂ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದ ಮಾರ್ನಸ್ ಲಬುಶೇನ್, ಇದೀಗ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡು ಇನಿಂಗ್ಸ್‌ಗಳಿಂದ ಕ್ರಮವಾಗಿ 0 & 13 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಮಾರ್ನಸ್ ಲಬುಶೇನ್ ಅಗ್ರಸ್ಥಾನದಿಂದ ದಿಢೀರ್ ಆಗಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌, ಇದೀಗ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನು ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಮೂರನೇ ಸ್ಥಾನದಲ್ಲಿದ್ದ ಟ್ರಾವಿಸ್ ಹೆಡ್‌, ಆ್ಯಷಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದರೂ ಸಹಾ ಒಂದು ಸ್ಥಾನ ಜಾರಿ ನಾಲ್ಕನೇ ಸ್ಥಾನಕ್ಕಿಳಿದಿದ್ದಾರೆ. ಇನ್ನು ಮೊದಲ ಟೆಸ್ಟ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಎರಡನೇ ಸ್ಥಾನದಿಂದ ದಿಢೀರ್ ಎನ್ನುವಂತೆ 4 ಸ್ಥಾನ ಕುಸಿದು 6ನೇ ಸ್ಥಾನಕ್ಕೆ ಜಾರಿದ್ದಾರೆ. ಸ್ಟೀವ್ ಸ್ಮಿತ್, ಇಂಗ್ಲೆಂಡ್ ಎದುರು ಮೊದಲೆರಡು ಇನಿಂಗ್ಸ್‌ನಲ್ಲಿ ಕ್ರಮವಾಗಿ 16 & 6 ರನ್ ಬಾರಿಸಿದ್ದರು. 

ಇನ್ನು ಕಳೆದ ಡಿಸೆಂಬರ್‌ನಿಂದೀಚೆಗೆ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಪಂತ್, 758 ರೇಟಿಂಗ್ ಅಂಕಗಳೊಂದಿಗೆ ಟೆಸ್ಟ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನು ವಿರಾಟ್ ಕೊಹ್ಲಿ, 14ನೇ ಸ್ಥಾನಕ್ಕೆ ಜಾರಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಇತ್ತೀಚೆಗಷ್ಟೇ ಟೆಸ್ಟ್ ವಿಶ್ವಕಪ್‌ನಿಂದ ಹೊರಗುಳಿದ ಹೊರತಾಗಿಯೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇಂಗ್ಲೆಂಡ್‌ನ ವೇಗಿಗಳಾದ ಓಲಿ ರಾಬಿನ್‌ಸನ್ ಹಾಗೂ ಸ್ಟುವರ್ಟ್‌ ಬ್ರಾಡ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Follow Us:
Download App:
  • android
  • ios