ಐಸಿಸಿ ಅಂಡರ್-19 ವಿಶ್ವಕಪ್‌ನ ಮಳೆ ಪೀಡಿತ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 18 ರನ್‌ಗಳ ರೋಚಕ ಜಯ ಸಾಧಿಸಿದೆ. ವೈಭವ್ ಸೂರ್ಯವಂಶಿ ಮತ್ತು ಅಭಿಗ್ಯಾನ್ ಕುಂಡು ಅವರ ಅರ್ಧಶತಕಗಳ ನೆರವಿನಿಂದ ಭಾರತ ಉತ್ತಮ ಮೊತ್ತ ಕಲೆಹಾಕಿತು.
ಬುಲವಾಯೊ(ಜಿಂಬಾಬ್ವೆ): ಐಸಿಸಿ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 18 ರನ್ ರೋಚಕ ಗೆಲುವು ಸಾಧಿಸಿದ್ದು, ಸೂಪರ್-6 ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದೆ. ಮಳೆ ಪೀಡಿತ ಪಂದ್ಯದಲ್ಲಿ ಒಂದು ಹಂತದಲ್ಲಿ ಬಾಂಗ್ಲಾ ಗೆಲುವಿನ ಸನಿಹದಲ್ಲಿತ್ತಾದರೂ, ಭಾರತ ತಂಡ ಮಾರಕ ದಾಳಿ ನಡೆಸಿ ವಿಜಯಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ 48.4 ಓವರ್‌ಗಳಲ್ಲಿ 238 ರನ್‌ಗೆ ಆಲೌಟಾಯಿತು. ವೈಭವ್ ಸೂರ್ಯವಂಶಿ 67 ಎಸೆತಗಳಲ್ಲಿ 72, ಅಭಿಗ್ಯಾನ್ ಕುಂಡು 112 ಎಸೆತಕ್ಕೆ 80 ರನ್ ಸಿಡಿಸಿದ್ದು ಹೊರತುಪಡಿಸಿ ಇತರರು ವಿಫಲರಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ 19.2 ಓವರ್‌ನಲ್ಲಿ 2 ವಿಕೆಟ್‌ಗೆ 90 ರನ್ ಗಳಿಸಿತ್ತು. ಈ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು 29 ಓವರ್‌ಗೆ ಇಳಿಸಿ ಬಾಂಗ್ಲಾಗೆ 165 ರನ್ ಗುರಿ ನೀಡಲಾಯಿತು. ಅಂದರೆ ತಂಡಕ್ಕೆ 70 ಎಸೆತಕ್ಕೆ 75 ರನ್ ಬೇಕಿತ್ತು. ಆದರೆ ಆ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು. 28.3 ಓವರ್‌ಗಳಲ್ಲಿ 146ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಪಾಕಿಸ್ತಾನ ಬಳಿಕ ಬಾಂಗ್ಲಾಗೂ ಭಾರತ ನೋ ಹ್ಯಾಂಡ್‌ಶೇಕ್!
ಬುಲವಾಯೊ(ಜಿಂಬಾಬ್ವೆ): ಕಳೆದ ವರ್ಷ ಏಷ್ಯಾಕಪ್ ವೇಳೆ ಆರಂಭಗೊಂಡಿದ್ದ ನೋ ಹ್ಯಾಂಡ್‌ಶೇಕ್ ವಿವಾದ ಈಗ ಅಂಡರ್-19 ಏಕದಿನ ವಿಶ್ವಕಪ್‌ಗೂ ಕಾಲಿಟ್ಟಿದೆ. ಪಾಕಿಸ್ತಾನ ಬಳಿಕ ಬಾಂಗ್ಲಾದೇಶಕ್ಕೂ ಭಾರತ ತಂಡ ಹಸ್ತಲಾಘವ ನಿರಾಕರಿಸಿದ್ದು, ಇದರೊಂದಿಗೆ ಹ್ಯಾಂಡ್‌ಶೇಕ್ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ.
ಶನಿವಾರ ಭಾರತ-ಬಾಂಗ್ಲಾದೇಶ ಪಂದ್ಯ ನಡೆಯಿತು. ಟಾಸ್‌ಗಾಗಿ ಭಾರತದ ನಾಯಕ ಆಯುಶ್ ಮ್ಹಾತ್ರೆ ಹಾಗೂ ಬಾಂಗ್ಲಾದೇಶದ ಉಪನಾಯಕ ಜವಾದ್ ಅಬ್ರಾರ್ ಕ್ರೀಡಾಂಗಣಕ್ಕೆ ಆಗಮಿಸಿದರು. ಸಾಮಾನ್ಯವಾಗಿ ಟಾಸ್ ವೇಳೆ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡುತ್ತಾರೆ. ಆದರೆ ಟಾಸ್‌ಗೆ ಮುನ್ನ ಹಾಗೂ ನಂತರ ಇಬ್ಬರು ಆಟಗಾರರೂ ಹಸ್ತಲಾಘವ ಮಾಡಲಿಲ್ಲ. ಟಾಸ್ ಬಳಿಕ ರೆಫ್ರಿಗೆ ಸಂದರ್ಶನ ನೀಡಿ ಇಬ್ಬರೂ ತಮ್ಮ ತಮ್ಮ ಡ್ರೆಸ್ಸಿಂಗ್ ರೂಮ್ ಕಡೆಗೆ ಸಾಗಿದರು. ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಬಗ್ಗೆ ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ಯಾವುದೇ ಹೇಳಿಕೆ ನೀಡಿಲ್ಲ.
ಇನ್ನು ಪಂದ್ಯ ಮುಕ್ತಾಯದ ಬಳಿಕ ಹ್ಯಾಂಡ್‌ಶೇಕ್ ಮಾಡುವ ಉಭಯ ದೇಶಗಳ ಆಟಗಾರರು ಕ್ರೀಡಾಸ್ಪೂರ್ತಿ ಮರೆದರು.
ಲಂಕಾಗೆ 203 ರನ್ ಜಯ
ಜಪಾನ್ ವಿರುದ್ಧ ಲಂಕಾ 203 ರನ್ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಲಂಕಾ 4 ವಿಕೆಟ್‌ಗೆ 387 ರನ್ ಗಳಿಸಿತು. ವಿರಾನ್ ಚಮುಡಿತಾ 192, ದಿಮಂತ 115 ರನ್ ಸಿಡಿಸಿದರು. ಜಪಾನ್ 8 ವಿಕೆಟ್‌ಗೆ 184 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇಂದಿನ ಪಂದ್ಯಗಳು
ವೆಸ್ಟ್‌ಇಂಡೀಸ್-ಅಫ್ಘಾನಿಸ್ತಾನ, ಇಂಗ್ಲೆಂಡ್-ಜಿಂಬಾಬ್ವೆ, ನ್ಯೂಜಿಲೆಂಡ್-ಅಮೆರಿಕ


