ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಭಾರತ ತಂಡ ಪ್ರಕಟವಾಗಿದೆ. ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿದ್ದು, ಸ್ಟಾರ್ ಆಲ್ರೌಂಡರ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ರಿಷಭ್ ಪಂತ್ ಗಾಯಗೊಂಡಿದ್ದು, ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡವು 2-1ರ ಮುನ್ನಡೆ ಸಾಧಿಸಿದೆ. ಇದೀಗ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿರುವ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಇದೀಗ ಜುಲೈ 23ರಿಂದ ಆರಂಭವಾಗಲಿರುವ 4ನೇ ಟೆಸ್ಟ್‌ನಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ. ಇದೀಗ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ನಾಲ್ಕನೇ ಟೆಸ್ಟ್ ಆರಂಭಕ್ಕೂ ಮೊದಲೇ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದು, ಓರ್ವ ಸ್ಟಾರ್ ಆಲ್ರೌಂಡರ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದರೇ, ಮತ್ತೋರ್ವ ಎಡಗೈ ವೇಗಿ ನಾಲ್ಕನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಭಾರತ ತಂಡದಲ್ಲಿ ಗಾಯದ ಸಮಸ್ಯೆ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಇದು ಟೀಂ ಇಂಡಿಯಾ ತಲೆನೋವು ಹೆಚ್ಚುವಂತೆ ಮಾಡಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆಯಲ್ಲಿಯೇ ರಿಷಭ್ ಪಂತ್ ಗಾಯಗೊಂಡಿದ್ದರು. ಇನ್ನು ಆಕಾಶ್‌ದೀಪ್ ಹಾಗೂ ಅರ್ಶದೀಪ್ ಸಿಂಗ್ ಕೂಡಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇನ್ನು ಎಡಗೈ ವೇಗಿ ಅರ್ಶದೀಪ್ ಸಿಂಗ್ ಮ್ಯಾಂಚೆಸ್ಟರ್ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಆಟಗಾರರ ಗಾಯದ ಸಮಸ್ಯೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ತಲೆನೋವು ಹೆಚ್ಚಿಸುವಂತೆ ಮಾಡಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುವ ವೇಳೆಯಲ್ಲಿ ರಿಷಭ್ ಪಂತ್ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದರು. ಕೆಲ ಮಾಧ್ಯಮ ವರದಿಗಳ ಪ್ರಕಾರ ರಿಷಭ್ ಪಂತ್, ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ವೇಳೆಯಲ್ಲಿ ಕೇವಲ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಧೃವ್ ಜುರೆಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಇಲ್ಲದಿದ್ದರೇ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಮತ್ತೊಮ್ಮೆ ವಿಕೆಟ್ ಕೀಪರ್ ಅಗಿ ಕಣಕ್ಕಿಳಿಯಬೇಕಾಗುತ್ತದೆ. ಸದ್ಯ ರಿಷಭ್ ಪಂತ್, ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು, ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಟೀಂ ಮ್ಯಾನೇಜ್‌ಮೆಂಟ್ ರಿಷಭ್ ಪಂತ್ ಅವರನ್ನು ಸ್ಪೆಷಲಿಸ್ಟ್ ಬ್ಯಾಟರ್ ರೂಪದಲ್ಲಿ ಕಣಕ್ಕಿಳಿಸಲು ಒಲವು ತೋರಿದೆ ಎನ್ನಲಾಗುತ್ತಿದೆ.
ಇನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇನ್ನುಳಿದ ಎರಡು ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಇದೀಗ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಯಾರಿಗೆ ಮಣೆಹಾಕಬೇಕು ಎನ್ನುವ ಗೊಂದಲ ಕೋಚ್ ಗಂಭೀರ್ ಹಾಗೂ ಕ್ಯಾಪ್ಟನ್ ಗಿಲ್ ಅವರನ್ನು ಕಾಡುತ್ತಿದೆ. ಶಾರ್ದೂಲ್ ಠಾಕೂರ್ ಒಂದೊಳ್ಳೆಯ ಆಯ್ಕೆಯಾಗಿದ್ದರೂ, ಸದ್ಯ ಮುಂಬೈ ಮೂಲದ ಆಟಗಾರ ಒಳ್ಳೆಯ ಫಾರ್ಮ್‌ನಲ್ಲಿಲ್ಲ. ನಿತೀಶ್ ಜಾಗಕ್ಕೆ ಓರ್ವ ವೇಗದ ಬೌಲರ್‌ಗೆ ಅವಕಾಶ ನೀಡಿದರೆ, ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗ ಕೊಂಚ ಮಂಕಾಗಲಿದೆ.
ಇನ್ನು ಗಾಯದ ಸಮಸ್ಯೆಯ ಹೊರತಾಗಿಯೂ ವೇಗಿ ಆಕಾಶ್‌ದೀಪ್ ಸಿಂಗ್ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಕಳೆದ ಮೂರು ಟೆಸ್ಟ್ ಪಂದ್ಯದಲ್ಲಿ ಒಮ್ಮೆಯೂ ಅರ್ಧಶತಕ ಸಿಡಿಸಲು ವಿಫಲವಾಗಿರುವ ಕರುಣ್ ನಾಯರ್ ಕೂಡಾ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್‌ಗೆ ಭಾರತ ತಂಡ ಹೀಗಿದೆ ನೋಡಿ:
ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್ & ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧೃವ್ ಜುರೆಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅನ್ಶೂಲ್ ಕಂಬೋಜ್.


