ನವದೆಹಲಿ(ಮಾ.26): ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್‌ ಸರಣಿ ಸದ್ಯದಲ್ಲೇ ಆಯೋಜನೆಗೊಳ್ಳುವ ಸಾಧ್ಯತೆ ಇದೆ. 2012-13ರ ಬಳಿಕ ಇದೇ ಮೊದಲ ಬಾರಿಗೆ ಈ ವರ್ಷ ಎರಡು ದೇಶಗಳು ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚೆಗೆ ಎರಡೂ ರಾಷ್ಟ್ರಗಳ ಕದನ ವಿರಾಮಕ್ಕೆ ಸಮ್ಮತಿಸಿ, ರಾಜತಾಂತ್ರಿಕ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಒಪ್ಪಿದ ಬೆನ್ನಲ್ಲೇ ಕ್ರಿಕೆಟ್‌ ಸರಣಿ ಆಯೋಜನೆಯ ಬಗ್ಗೆ ಚರ್ಚೆ ಶುರುವಾಗಿದೆ.

ಭಾರತ ತಂಡಕ್ಕೆ ಬಿಡುವಿಲ್ಲದ ವೇಳಾಪಟ್ಟಿಯಿದ್ದರೂ, ಈ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮೊದಲು 6 ದಿನಗಳಲ್ಲಿ ಅವಧಿಯಲ್ಲಿ ಸರಣಿಯೊಂದನ್ನು ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸರಣಿಗೆ ತಂಡವನ್ನು ಸಿದ್ಧಗೊಳಿಸುವಂತೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಗೆ ಪಾಕಿಸ್ತಾನ ಸರ್ಕಾರದ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ಭಾರತಕ್ಕೆ ಬರುತ್ತಾ ಪಾಕ್‌ ತಂಡ?: ಈ ಬೆಳವಣಿಗೆಯನ್ನು ಪಿಸಿಬಿ ಅಧಿಕಾರಿಯೊಬ್ಬರು ಆರಂಭದಲ್ಲಿ ನಿರಾಕರಿಸಿದರೂ, ಆ ಬಳಿಕ ಸರಣಿ ನಡೆಯಬಹುದು ಎಂಬ ಸುಳಿವು ನೀಡಿದರು. ಪಿಸಿಬಿ ಅಧ್ಯಕ್ಷ ಎಹ್ಸಾನ್‌ ಮಣಿ, ಬಿಸಿಸಿಐನ ಯಾವುದೇ ಅಧಿಕಾರಿ ನಮ್ಮನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿ ಗುಣಗಾನ ಮಾಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌

ಪಿಸಿಬಿಯ ಕೆಲ ಮೂಲಗಳ ಪ್ರಕಾರ, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲಿದೆ ಎನ್ನಲಾಗಿದೆ. ಆದರೆ ಇನ್ನೂ ಕೆಲವರ ಪ್ರಕಾರ, ಪಾಕಿಸ್ತಾನ ತಂಡವೇ ಭಾರತಕ್ಕೆ ಪ್ರಯಾಣಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತ್ತೀಚೆಗಷ್ಟೇ ಪಾಕಿಸ್ತಾನ ಇಕ್ವೆಸ್ಟ್ರಿಯನ್‌ ತಂಡಕ್ಕೆ ಭಾರತ ವೀಸಾ ನೀಡಿತ್ತು. ಅಲ್ಲದೇ ಸದ್ಯ ನವದೆಹಲಿಯಲ್ಲಿ ನಡೆಯುತ್ತಿರುವ ಶೂಟಿಂಗ್‌ ವಿಶ್ವಕಪ್‌ನಲ್ಲೂ ಪಾಕಿಸ್ತಾನದ ಸ್ಪರ್ಧಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೂ ವೀಸಾ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ. ಅಲ್ಲದೇ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಮುಕ್ತಾಯಗೊಂಡ ಬಳಿಕ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಟಿ20 ವಿಶ್ವಕಪ್‌ಗೂ ಮುನ್ನ ನಾವು ಕೆಲ ಟಿ20 ಸರಣಿಗಳನ್ನು ಆಡಲಿದ್ದೇವೆ ಎಂದಿದ್ದರು. ಕಳೆದ 8 ವರ್ಷಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಆಯೋಜಿಸುವ ಟೂರ್ನಿಗಳು ಇಲ್ಲವೇ ಏಷ್ಯಾಕಪ್‌ನಲ್ಲಿ ಮಾತ್ರ ಮುಖಾಮುಖಿಯಾಗಿವೆ.