* ಏಕದಿನ ಸರಣಿ ಕೈವಶ ಮಾಡಿಕೊಳ್ಳುವ ಹೊಸ್ತಿಲಲ್ಲಿ ಟೀಂ ಇಂಡಿಯಾ* ಈಗಾಗಲೇ ಮೊದಲ ಏಕದಿನ ಪಂದ್ಯ ಗೆದ್ದು ಬೀಗಿರುವ ಭಾರತ * ಕೆ ಎಲ್ ರಾಹುಲ್ ಇಂದು ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ

ಹರಾರೆ(ಆ.20): ಮೊದಲ ಏಕದಿನ ಪಂದ್ಯದಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಶನಿವಾರ ಜಿಂಬಾಬ್ವೆ ವಿರುದ್ಧ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲೂ ಸಂಘಟಿತ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಏಷ್ಯಾಕಪ್‌ ಟಿ20ಗೂ ಮುನ್ನ ಅಗತ್ಯ ಬ್ಯಾಟಿಂಗ್‌ ಅಭ್ಯಾಸ ನಡೆಸಲು ಕೆ.ಎಲ್‌.ರಾಹುಲ್‌ ಮತ್ತು ದೀಪಕ್‌ ಹೂಡಾ ಎದುರು ನೋಡುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ರಾಹುಲ್‌ ಆರಂಭಿಕರಾಗಿ ಕಣಕ್ಕಿಳಿಯದೆ ಇದ್ದಿದ್ದು ಅಚ್ಚರಿಗೆ ಕಾರಣವಾಗಿತ್ತು. ಬಾಕಿ 2 ಪಂದ್ಯಗಳಲ್ಲಿ ಅವರು ಇನ್ನಿಂಗ್ಸ್‌ ಆರಂಭಿಸುವ ನಿರೀಕ್ಷೆ ಇದೆ. ಜಿಂಬಾಬ್ವೆ ಬಲಿಷ್ಠ ಬೌಲಿಂಗ್‌ ಪಡೆಯನ್ನು ಹೊಂದಿಲ್ಲದಿದ್ದರೂ ಪಂದ್ಯದ ಆರಂಭದಲ್ಲಿ ವೇಗಿಗಳಿಗೆ ಸಣ್ಣ ಪ್ರಮಾಣದ ನೆರವು ದೊರೆಯಲಿದೆ ಎನ್ನುವುದು ಮೊದಲ ಪಂದ್ಯದಲ್ಲಿ ಸಾಬೀತಾಗಿತ್ತು. ಹೀಗಾಗಿ, ಭಾರತ ಟಾಸ್‌ ಗೆದ್ದರೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ರಾಹುಲ್‌ ಉತ್ತಮ ಅಭ್ಯಾಸ ನಡೆಸುವತ್ತ ಗಮನ ಹರಿಸಬೇಕಿದೆ ಎನ್ನುವುದು ತಜ್ಞರ ಅಭಿಪ್ರಾಯ.

ದೀಪಕ್‌ ಹೂಡಾ ಸಹ ಏಷ್ಯಾಕಪ್‌ ತಂಡದಲ್ಲಿದ್ದು ಅವರೂ ಸಹ ದೊಡ್ಡ ಇನ್ನಿಂಗ್ಸ್‌ ಮೂಲಕ ತಂಡದ ಆಡಳಿತದ ಗಮನ ಸೆಳೆಯಲು ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ಶಿಖರ್ ಧವನ್‌, ಶುಭ್‌ಮನ್‌ ಗಿಲ್‌, ಸಂಜು ಸ್ಯಾಮ್ಸನ್‌, ಇಶಾನ್ ಕಿಶನ್‌ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಯತ್ನಿಸಲಿದ್ದಾರೆ.

Ind vs ZIM: ಜಿಂಬಾಬ್ವೆಯನ್ನು ಅನಾಯಾಸವಾಗಿ ಬಗ್ಗುಬಡಿದ ಟೀಂ ಇಂಡಿಯಾ, ಮೀಮ್ಸ್ ವೈರಲ್‌

ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌ ಏಷ್ಯಾಕಪ್‌ ಮೀಸಲು ಪಡೆಯಲ್ಲಿದ್ದು ಪ್ರದರ್ಶನ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಪ್ರಸಿದ್‌್ಧ ಕೃಷ್ಣ ಮತ್ತು ಮೊಹಮದ್‌ ಸಿರಾಜ್‌ ಸೀಮಿತ ಓವರ್‌ ತಂಡದಲ್ಲಿ ಕಾಯಂ ಸ್ಥಾನಕ್ಕಾಗಿ ಈ ಅವಕಾಶವನ್ನು ಬಳಸಿಕೊಳ್ಳಬೇಕಿದೆ.

ಮತ್ತೊಂದೆಡೆ ಆತಿಥೇಯ ಜಿಂಬಾಬ್ವೆ ಸುಧಾರಿತ ಪ್ರದರ್ಶನ ತೋರಲು ಕಾತರಿಸುತ್ತಿದೆ. ಭಾರತ ವಿರುದ್ಧ ಮೇಲುಗೈ ಸಾಧಿಸಿದರೆ ತಂಡದ ಆತ್ಮವಿಶ್ವಾಸ ಹೆಚ್ಚಲಿದೆ. ಜೊತೆಗೆ ತವರಿನ ಕ್ರಿಕೆಟ್‌ ಅಭಿಮಾನಿಗಳು ತಂಡವನ್ನು ಬೆಂಬಲಿಸಲು ಮತ್ತಷ್ಟು ಕಾರಣಗಳು ಸಿಕ್ಕಂತಾಗುತ್ತದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶಿಖರ್ ಧವನ್‌, ಶುಭ್‌ಮನ್‌ ಗಿಲ್‌, ಇಶಾನ್ ಕಿಶನ್‌, ಕೆ ಎಲ್ ರಾಹುಲ್‌(ನಾಯಕ), ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌, ಅಕ್ಷರ್‌ ಪಟೇಲ್, ದೀಪಕ್‌ ಚಹರ್‌, ಕುಲ್ದೀಪ್‌ ಯಾದವ್, ಪ್ರಸಿದ್ದ್ ಕೃಷ್ಣ, ಮೊಹಮ್ಮದ್ ಸಿರಾಜ್‌.

ಜಿಂಬಾಬ್ವೆ: ಇನೊಸೆಂಟ್‌, ಮರುಮಾನಿ, ಮಧೆವೆರೆ, ವಿಲಿಯಮ್ಸ್‌, ರಾಜಾ, ಚಕಾಬ್ವ(ನಾಯಕ), ಬಲ್‌ರ್‍, ಜಾಂಗ್ವೆ, ಎವಾನ್ಸ್‌, ಎನ್‌ಗಾರವ, ವಿಕ್ಟರ್‌.

ಪಂದ್ಯ ಆರಂಭ: ಮಧ್ಯಾಹ್ನ 12.45ಕ್ಕೆ
ನೇರ ಪ್ರಸಾರ: ಸೋನಿ ಟೆನ್‌