ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶುಭ್‌ಮನ್ ಗಿಲ್ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಆಕರ್ಷಕ ಶತಕತಮ್ಮ ಶತಕ ಬಾರಿಸಲು ಯುವಿ ನೀಡಿದ ಸಲಹೆ ಪ್ರಯೋಜನಕ್ಕೆ ಬಂತು

ಹರಾರೆ(ಆ.23): ಜಿಂಬಾಬ್ವೆ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶುಭ್‌ಮನ್‌ ಗಿಲ್‌, ತಾವು ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. 22 ವರ್ಷದ ಯುವ ಬ್ಯಾಟರ್‌ ಶುಭ್‌ಮನ್ ಗಿಲ್‌, ಆಗಸ್ಟ್‌ 22ರಂದು ನಡೆದ ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು.

ಜಿಂಬಾಬ್ವೆ ಎದುರಿನ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್‌ಗಳ ರೋಚಕ ಜಯ ಸಾಧಿಸಿತು. ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಗಿಲ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಮಾತ್ರವಲ್ಲದೇ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಬಲಗೈ ಬ್ಯಾಟರ್‌ ಶುಭ್‌ಮನ್‌ ಗಿಲ್‌, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 122.50 ಬ್ಯಾಟಿಂಗ್ ಸರಾಸರಿಯಲ್ಲಿ 245 ರನ್ ಬಾರಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದ್ದರು.

ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಸಹ ಆಟಗಾರ ಇಶಾನ್ ಕಿಶನ್ ಜತೆಗಿನ ಸಂದರ್ಶನದ ವೇಳೆಯಲ್ಲಿ, ತಮ್ಮ ಪ್ರದರ್ಶನ ಸುಧಾರಿಸುವಲ್ಲಿ ಯುವರಾಜ್ ಸಿಂಗ್ ನೀಡಿದ ಕೆಲವೊಂದು ಸಲಹೆಗಳು ಪ್ರಯೋಜನಕ್ಕೆ ಬಂದವು ಎಂದು ಗಿಲ್ ಹೇಳಿದ್ದಾರೆ. ನಾನು ಜಿಂಬಾಬ್ವೆಗೆ ಬಂದಿಳಿಯುವ ಮುನ್ನ ನಾನು ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಈ ಸಂದರ್ಭದಲ್ಲಿ ಅವರು, ನೀನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತೀಯ. ಪಿಚ್‌ಗೆ ಹೊಂದಿಕೊಂಡ ಬಳಿಕ ಸಾಕಷ್ಟು ಕ್ರೀಸ್‌ನಲ್ಲಿರಲು ಪ್ರಯತ್ನಿಸು ಎಂದಿದ್ದರು. ಇದಷ್ಟೇ ಅಲ್ಲದೇ ಅವರು ಶತಕ ಸಿಡಿಸಲು ಪ್ರೇರೇಪಿಸುತ್ತಿದ್ದರು ಎಂದು ಶುಭ್‌ಮನ್‌ ಗಿಲ್ ಹೇಳಿದ್ದಾರೆ.

Scroll to load tweet…

ಜಿಂಬಾಬ್ವೆ ಠಕ್ಕರ್‌ಗೆ ಗಲಿಬಿಲಿಗೊಂಡ ಭಾರತ, ಕೊನೆಯ ಹಂತದಲ್ಲಿ ಹರಸಾಹಸದ ಗೆಲುವು!

ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ನಡೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ಶುಭ್‌ಮನ್‌ ಗಿಲ್‌ ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ವಿಂಡೀಸ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಗಿಲ್ ಅಜೇಯ 98 ರನ್ ಬಾರಿಸಿದ್ದರು. ಆದರೆ ಮೂರಂಕಿ ಮೊತ್ತ ದಾಖಲಿಸಲು ವಿಫಲವಾಗಿದ್ದರು.

ಇನ್ನು ಶುಭ್‌ಮನ್‌ ಗಿಲ್‌ ಶತಕ ಸಿಡಿಸಿದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಮಾಜಿ ಕ್ರಿಕೆಟಿಗ ಯುಜರಾಜ್ ಸಿಂಗ್, ಕೊನೆಗೂ ಸೆಂಚುರಿ..! ನಿಜಕ್ಕೂ ಅರ್ಹವಾದ ಶತಕವಿದು ಗಿಲ್‌. ಅಭಿನಂದನೆಗಳು ನಿಮಗೆ. ಇದು ನಿಮ್ಮ ಶತಕದ ಆರಂಭವಷ್ಟೇ, ಇನ್ನಷ್ಟು ಶತಕಗಳು ನಿಮ್ಮಿಂದ ಬರುವುದಿದೆ ಎಂದು ಯುವಿ ಟ್ವೀಟ್ ಮಾಡಿದ್ದರು. 

Scroll to load tweet…

ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಶುಭ್‌ಮನ್‌ ಗಿಲ್‌ ಕೇವಲ 97 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 130 ರನ್ ಚಚ್ಚಿದರು.