* ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ* ಉಭತ ತಂಡಗಳಲ್ಲೂ ತಲಾ 4 ಬದಲಾವಣೆ* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆವೇಶ್ ಖಾನ್
ಕೋಲ್ಕತಾ(ಫೆ.20): ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲ್ಲಾರ್ಡ್ (Kieron Pollard) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಉಭಯ ತಂಡಗಳಲ್ಲೂ 4 ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಭಾರತ ತಂಡದಲ್ಲಿ ನಿರೀಕ್ಷೆಯಂತೆಯೇ ಮಹತ್ವದ ಬದಲಾವಣೆಗಳಾಗಿದ್ದು, ವೇಗದ ಬೌಲರ್ ಆವೇಶ್ ಖಾನ್ (Avesh Khan) ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯವು ಉಭಯ ತಂಡಗಳ ಪಾಲಿಗೆ ಕೇವಲ ಔಪಚಾರಿಕ ಪಂದ್ಯ ಎನಿಸಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ (Team India) ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದು, ಇದೀಗ ಕ್ಲೀನ್ ಸ್ವೀಪ್‌ನತ್ತ ಚಿತ್ತ ನೆಟ್ಟಿದೆ. ಇನ್ನೊಂದೆಡೆ ಕೀರನ್ ಪೊಲ್ಲಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡವು ಭಾರತ ಪ್ರವಾಸದಲ್ಲಿ ಏಕದಿನ ಸರಣಿಯೂ ಸೇರಿದಂತೆ ಸತತ 5 ಪಂದ್ಯಗಳನ್ನು ಸೋತಿದ್ದು, ಕೊನೆಯ ಪಂದ್ಯದಲ್ಲಿ ಶತಾಯಗತಾಯ ಗೆದ್ದು ಪ್ರವಾಸ ಮುಕ್ತಾಯಗೊಳಿಸಲು ಎದುರು ನೋಡುತ್ತಿದೆ.
ಇನ್ನುಳಿದಂತೆ ವೆಸ್ಟ್ ಇಂಡೀಸ್ ತಂಡದಲ್ಲಿ 4 ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಹೇಡನ್ ವಾಲ್ಷ್, ಫ್ಯಾಬಿಯನ್ ಅಲೆನ್, ಡೋಮಿನಿಕ್ ಡ್ರೇಕ್ಸ್ ಹಾಗೂ ಶಾಯ್ ಹೋಪ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಭಾರತ ತಂಡದಲ್ಲೂ 4 ಬದಲಾವಣೆಗಳನ್ನು ಮಾಡಲಾಗಿದ್ದು ಆವೇಶ್ ಖಾನ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಹಾಗೂ ಋತುರಾಜ್ ಗಾಯಕ್ವಾಡ್ ತಂಡ ಕೂಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಯುಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್ ಹಾಗೂ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ. ಟಾಸ್ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾರತ ಪರ ಯುವ ಕ್ರಿಕೆಟಿಗರಾದ ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.
Ind vs WI: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗಿಂದು ಹ್ಯಾಟ್ರಿಕ್ ವೈಟ್‌ವಾಷ್ ಗುರಿ..!
ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿ ಗಮನ ಸೆಳೆದಿದ್ದ ಆವೇಶ್ ಖಾನ್ ಇಂದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ ಕ್ಯಾಪ್ ನೀಡುವ ಮೂಲಕ ಭಾರತ ತಂಡಕ್ಕೆ ಸ್ವಾಗತಿಸಿದ್ದಾರೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಹಲವು ಪ್ರಯೋಗಗಳನ್ನು ನಡೆಸಲಾರಂಭಿಸಿದೆ. ಎರಡನೇ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿದ್ದು, ಶಾರ್ದೂಲ್ ಠಾಕೂರ್ ತಂಡ ಕೂಡಿಕೊಂಡಿದ್ದಾರೆ.
ತಂಡಗಳು ಹೀಗಿವೆ ನೋಡಿ
ಭಾರತ: ರೋಹಿತ್ ಶರ್ಮಾ(ನಾಯಕ), ಋುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಕುಮಾರ್, ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಹರ್ಷಲ್ ಪಟೇಲ್, ಆವೇಶ್ ಖಾನ್, ರವಿ ಬಿಷ್ಣೋಯ್.
ವಿಂಡೀಸ್: ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್, ರೋಮನ್ ಪೋವೆಲ್, ರೋಸ್ಟನ್ ಚೇಸ್, ಕೀರನ್ ಪೊಲ್ಲಾರ್ಡ್(ನಾಯಕ), ಜೇಸನ್ ಹೋಲ್ಡರ್, ರೊಮ್ಯಾರಿಯೊ ಶೆಫರ್ಡ್, ಡಾಮಿನಿಕ್ ಡ್ರಿಕ್ಸ್, ಫ್ಯಾಬಿನ್ ಅಲೆನ್, ಹೇಡನ್ ವಾಲ್ಷ್.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
