* ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ* 1000ನೇ ಏಕದಿನ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ* ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದೀಪಕ್ ಹೂಡಾ
ಅಹಮದಾಬಾದ್(ಫೆ.06): ಭಾರತ ಹಾಗೂ ವೆಸ್ಟ್ ತಂಡಗಳ (India vs West Indies) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಟೀಂ ಇಂಡಿಯಾ ಆಡುತ್ತಿರುವ ಐತಿಹಾಸಿಕ 1,000ನೆಯ ಏಕದಿನ ಪಂದ್ಯದಲ್ಲಿ ಭಾರತ ಪರ ದೀಪಕ್ ಹೂಡಾ (Deepak Hooda) ಪಾದಾರ್ಪಣೆ ಮಾಡಿದ್ದಾರೆ
ಹೌದು, ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ (Narendra Modi Stadium), ಭಾರತ ಕ್ರಿಕೆಟ್ ತಂಡವು ಆಡುತ್ತಿರುವ 1000ನೆಯ ಏಕದಿನ ಪಂದ್ಯಕ್ಕೆ ಆತಿಥ್ಯವನ್ನು ವಹಿಸಿದೆ. ಸೀಮಿತ ಓವರ್‌ಗಳ ತಂಡದ ನಾಯಕರಾದ ಬಳಿಕ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಏಕದಿನ ಸರಣಿಗೆ ಪೂರ್ಣ ಪ್ರಮಾಣದ ನಾಯಕರಾಗಿ ಕಣಕ್ಕಿಳಿದಿದ್ದಾರೆ. ಭಾರತ ತಂಡವು ಆರು ತಜ್ಞ ಬ್ಯಾಟರ್‌ಗಳು ಹಾಗೂ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿದೆ
ಕೆ.ಎಲ್. ರಾಹುಲ್(KL Rahul), ಶ್ರೇಯಸ್ ಅಯ್ಯರ್ (Shreyas Iyer) ಅನುಪಸ್ಥಿತಿಯಲ್ಲಿ ನಿರೀಕ್ಷೆಯಂತೆಯೇ ಭಾರತ ತಂಡಕ್ಕೆ ಆಲ್ರೌಂಡರ್ ದೀಪಕ್ ಹೂಡಾ ಐತಿಹಾಸಿಕ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನುಳಿದಂತೆ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಸಾಕಷ್ಟು ಬಿಡುವಿನ ಬಳಿಕ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ. ಕುಲ್ದೀಪ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದಾರೆ.
Ind vs WI: ಸಾವಿರದ ಏಕದಿನ ಇತಿಹಾಸಕ್ಕೆ ಟೀಂ ಇಂಡಿಯಾ ಸನ್ನದ್ದ..!
ಟೀಂ ಇಂಡಿಯಾ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದು, ಈ ತಾರಾ ವೇಗಿಗಳ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್,ಕನ್ನಡಿಗ ಪ್ರಸಿದ್ದ್ ಕೃಷ್ಣ ಹಾಗೂ ಶಾರ್ದೂಲ್ ಠಾಕೂರ್ ಮಿಂಚಲು ಎದುರು ನೋಡುತ್ತಿದ್ದಾರೆ.
ಭಾರತ ಹೊಸ ಮೈಲಿಗಲ್ಲು: 1974ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡಿದ್ದ ಭಾರತ ತಂಡ, ಇದುವರೆಗೂ 999 ಪಂದ್ಯಗಳನ್ನಾಡಿದೆ. ಇದರಲ್ಲಿ 518 ಪಂದ್ಯಗಳಲ್ಲಿ ಗೆಲುವು, 431ರಲ್ಲಿ ಸೋಲುಂಡಿದೆ. 9 ಪಂದ್ಯ ಟೈ ಆಗಿದ್ದರೆ, 41 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಂದಿಲ್ಲ. ಇನ್ನು 958 ಪಂದ್ಯಗಳನ್ನಾಡಿರುವ ಆಸ್ಪ್ರೇಲಿಯಾ 2ನೇ, 936 ಪಂದ್ಯಗಳನ್ನಾಡಿರುವ ಪಾಕಿಸ್ತಾನ 3ನೇ ಸ್ಥಾನದಲ್ಲಿದೆ. 999 ಏಕದಿನ ಪಂದ್ಯಗಳ ಪೈಕಿ ಟೀಂ ಇಂಡಿಯಾ ಎರಡು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು. ಇದಾಗಿ 28 ವರ್ಷಗಳ ಬಳಿಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ 2011ರಲ್ಲಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್‌ಗೆ ಮುತ್ತಿಕ್ಕಿತ್ತು.
ತಂಡಗಳು ಹೀಗಿವೆ ನೋಡಿ
ಭಾರತ ಕ್ರಿಕೆಟ್ ತಂಡ
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್, ಪ್ರಸಿದ್ಧ ಕೃಷ್ಣ.
ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ
ಶಾಯ್ ಹೋಪ್, ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಡ್ಯಾರನ್ ಬ್ರಾವೋ, ನಿಕೋಲಸ್ ಪೂರನ್, ಕೀರಾನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್
