* ಕೋವಿಡ್‌ನಿಂದ ಗುಣಮುಖರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್* ವಿಂಡೀಸ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಪಾಳಯದಲ್ಲಿ ಕೋವಿಡ್ ಭೀತಿ ಎದುರಾಗಿತ್ತು.* ಕೋವಿಡ್‌ನಿಂದ ಚೇತರಿಸಿಕೊಂಡಿದ್ದರೂ ಸಹಾ ಈ ಇಬ್ಬರು ಆಟಗಾರರು ಎರಡನೇ ಪಂದ್ಯಕ್ಕೆ ಅಲಭ್ಯ

ಅಹಮದಾಬಾದ್‌(ಫೆ.08): ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೂ ಮುನ್ನ ಕೋವಿಡ್‌ ಭೀತಿ ಎದುರಿಸಿದ್ದ ಟೀಂ ಇಂಡಿಯಾ (Team India) ಪಾಲಿಗೆ ಇದೀಗ ಸಮಾಧಾನಕರವಾದ ಸುದ್ದಿಯೊಂದು ಹೊರಬಿದ್ದಿದ್ದು, ಭಾರತ ಕ್ರಿಕೆಟ್ ತಂಡದ (Indian Cricket Team) ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ (Shikhar Dhawan) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್ ಅಯ್ಯರ್ (Shreyas Iyer) ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇದೀಗ ಈ ಇಬ್ಬರು ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ವೆಸ್ಟ್‌ ಇಂಡೀಸ್ ವಿರುದ್ದದ ಸರಣಿಗೂ ಮುನ್ನ ಶಿಖರ್ ಧವನ್‌, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್‌, ನವದೀಪ್ ಸೈನಿ ಜತೆಗೆ ನಾಲ್ವರು ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ 19 (COVID 19) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಇವರೆಲ್ಲರೂ ಐಸೋಲೇಷನ್‌ಗೆ ಒಳಗಾಗಿದ್ದರು ಹಾಗೂ ವೆಸ್ಟ್ ಇಂಡೀಸ್ ವಿರುದ್ದ ಫೆಬ್ರವರಿ 06ರಂದು ನಡೆದ ಪಂದ್ಯದಿಂದ ಹೊರಬಿದ್ದಿದ್ದರು. 

ಇದೀಗ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಅವರ ಕೋವಿಡ್ ಟೆಸ್ಟ್ (Covid Test) ರಿಪೋರ್ಟ್ ನೆಗೆಟಿವ್ ಬಂದಿದ್ದರೂ ಸಹಾ ವೆಸ್ಟ್ ಇಂಡೀಸ್ ವಿರುದ್ದ ಫೆಬ್ರವರಿ 09ರಂದು ನಡೆಯಲಿರುವ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದರ ಹೊರತಾಗಿಯೂ ಮೊಟೇರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಈ ಆಟಗಾರರು ಅಭ್ಯಾಸವನ್ನು ಆರಂಭಿಸಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವಿನ ಮೂರು ಪಂದ್ಯಗಳ ಸಂಪೂರ್ಣ ಏಕದಿನ ಸರಣಿಗೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಈ ಇಬ್ಬರು ಆಟಗಾರರಿಗೆ ಪ್ರೋಟೋಕಾಲ್‌ನಂತೆಯೇ ಲಘು ಅಭ್ಯಾಸ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಇದರ ಹೊರತಾಗಿಯೂ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಇವರ ಮೇಲೆ ನಿಗಾ ಇಟ್ಟಿದ್ದಾರೆ. ಈ ಇಬ್ಬರು ಆಟಗಾರರು ಆಯ್ಕೆಗೆ ಯಾವಾಗ ಲಭ್ಯರಾಗಲಿದ್ದಾರೆ ಎನ್ನುವುದನ್ನು ವೈದ್ಯಕೀಯ ಸಿಬ್ಬಂದಿಗಳು ತಿಳಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ದ ಹಿಂದೂ ವೆಬ್‌ಸೈಟ್ ವರದಿ ಮಾಡಿದೆ.

Ind vs WI: 2ನೇ ಏಕದಿನಕ್ಕೆ ತಂಡ ಕೂಡಿಕೊಂಡ ರಾಹುಲ್‌, ಮಯಾಂಕ್‌ ಕಠಿಣ ಅಭ್ಯಾಸ

ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ಅಲಭ್ಯತೆ ಹೆಚ್ಚು ಹಿನ್ನಡೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯುಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲ ಏಕದಿನ ಪಂದ್ಯದಲ್ಲಿ ಕೇವಲ 176 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 4 ವಿಕೆಟ್‌ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಎರಡನೇ ಏಕದಿನ ಪಂದ್ಯಕ್ಕೆ ಕೆ.ಎಲ್. ರಾಹುಲ್ (KL Rahul) ಹಾಗೂ ಮಯಾಂಕ್ ಅಗರ್‌ವಾಲ್ (Mayank Agarwal) ಇಬ್ಬರೂ ಸಹಾ ಆಯ್ಕೆಗೆ ಲಭ್ಯರಾಗಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್‌ ಟೀಂ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಉಪನಾಯಕ ಕೆ.ಎಲ್. ರಾಹುಲ್‌ ಆಯ್ಕೆಗೆ ಲಭ್ಯವಾಗಿರುವುದರಿಂದ ಬಹುತೇಕ ಇಶಾನ್ ಕಿಶನ್ ಇಲ್ಲವೇ ದೀಪಕ್ ಹೂಡಾ ಈ ಇಬ್ಬರಲ್ಲಿ ಒಬ್ಬರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಬಹುದು.