Ind vs WI: ವಿಂಡೀಸ್ ಎದುರು ಮಂಡಿಯೂರಿದ ಟೀಂ ಇಂಡಿಯಾ..!
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ವಿಂಡೀಸ್ ತಿರುಗೇಟು
ಭಾರತ ಎದುರು ವಿಂಡೀಸ್‌ಗೆ 6 ವಿಕೆಟ್ ಭರ್ಜರಿ ಜಯ
ಕಳೆದ 10 ಮುಖಾಮುಖಿಯಲ್ಲಿ ಮೊದಲ ಬಾರಿಗೆ ಭಾರತ ಎದುರು ಜಯ ಕಂಡ ವೆಸ್ಟ್ ಇಂಡೀಸ್
ಬಾರ್ಬಡೋಸ್(ಜು.30): ಇಶಾನ್ ಕಿಶನ್ ಆಕರ್ಷಕ ಬ್ಯಾಟಿಂಗ್ ಹಾಗೂ ಶಾರ್ದೂಲ್ ಠಾಕೂರ್ ಆಲ್ರೌಂಡ್ ಪ್ರದರ್ಶನದ ಹೊರತಾಗಿಯೂ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಮುಗ್ಗರಿಸಿದೆ. ನಾಯಕ ಶಾಯ್ ಹೋಪ್ ಬಾರಿಸಿದ ಅಜೇಯ ಅರ್ಧಶತಕ ಹಾಗೂ ಕೆಸಿ ಕಾರ್ಟಿ(48*) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಇದಷ್ಟೇ ಅಲ್ಲದೇ ಕಳೆದ 10 ಏಕದಿನ ಮುಖಾಮುಖಿಯಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತದ ಎದುರು ಮೊದಲ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಅನಾಯಾಸ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಇಬ್ಬರು ಆಟಗಾರರ ಬದಲಿಗೆ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕಲಾಗಿತ್ತು. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಶುಭ್‌ಮನ್ ಗಿಲ್ ಹಾಗೂ ಇಶಾನ್ ಕಿಶನ್ ಜೋಡಿ 90 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಗಿಲ್ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಇಶಾನ್ ಕಿಶನ್ 55 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 55 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
WI vs IND ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ವಿಶ್ರಾಂತಿ, 2ನೇ ಪಂದ್ಯದಲ್ಲಿ ಟಾಸ್ ಸೋತ ನಾಯಕ ಹಾರ್ದಿಕ್!
ಟೀಂ ಇಂಡಿಯಾ ದಿಢೀರ್ ಕುಸಿತ: ಗಿಲ್ ಹಾಗೂ ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡಿತು. ಸಂಜು ಸ್ಯಾಮ್ಸನ್ 9 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಲು ವಿಫಲರಾದರು. ಇನ್ನು ಅಕ್ಷರ್ ಪಟೇಲ್(1) ಹಾಗೂ ಹಾರ್ದಿಕ್ ಪಾಂಡ್ಯ(7) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಸೂರ್ಯಕುಮಾರ್ ಯಾದವ್(24), ಜಡೇಜಾ(10) ಹಾಗೂ ಶಾರ್ದೂಲ್ ಠಾಕೂರ್(16) ಕೊಂಚ ಪ್ರತಿರೋಧ ತೋರುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ವಿಂಡೀಸ್ ತಂಡಕ್ಕೆ ಶಾರ್ದೂಲ್ ಠಾಕೂರ್ ಮಹತ್ವದ ಘಟ್ಟದಲ್ಲಿ 3 ವಿಕೆಟ್ ಕಬಳಿಸಿ ಶಾಕ್ ನೀಡಿದರು. ವಿಂಡೀಸ್ ತಂಡವು ಒಂದು ಹಂತದಲ್ಲಿ 91 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ 5ನೇ ವಿಕೆಟ್‌ಗೆ ನಾಯಕ ಶಾಯ್ ಹೋಪ್(63) ಹಾಗೂ ಕೇಸಿ ಕಾರ್ಟಿ(48) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವುವಲ್ಲಿ ಯಶಸ್ವಿಯಾದರು.
ಕೊಹ್ಲಿ, ರೋಹಿತ್ ಇಬ್ಬರಿಗೂ ವಿಶ್ರಾಂತಿ!
ಬ್ರಿಡ್ಜ್‌ಟೌನ್: ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಅಚ್ಚರಿಯ ಪ್ರಯೋಗ ಮುಂದುವರಿಸಿದೆ. ಮೊದಲ ಏಕದಿನದಲ್ಲಿ ಬ್ಯಾಟಿಂಗ್‌ನಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಹಾಗೂ 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ರೋಹಿತ್ ಶರ್ಮಾ 2ನೇ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ವಿಶ್ವಕಪ್ ಸಿದ್ಧತೆಗಾಗಿ ಸರಣಿಯನ್ನು ಬಳಸಿಕೊಳ್ಳುವುದಾಗಿ ಹೇಳಿದ್ದ ಟೀಂ ಇಂಡಿಯಾ, ವಿಶ್ವಕಪ್‌ಗೆ ಕೇವಲ 2 ತಿಂಗಳು ಬಾಕಿ ಇರುವಾಗ ಅನಗತ್ಯ ಪ್ರಯೋಗಗಳಿಗೆ ಮುಂದಾಗಿರುವುದಕ್ಕೆ ಹಲವು ಕ್ರಿಕೆಟ್ ತಜ್ಞರಿಂದ ಟೀಕೆ ವ್ಯಕ್ತವಾಗಿದೆ. ಕೊಹ್ಲಿ ಹಾಗೂ ರೋಹಿತ್ ಇಬ್ಬರೂ ಟಿ20 ಸರಣಿಯಲ್ಲಿ ಆಡದಿರುವ ಕಾರಣ ಅವರಿಗೆ ಈಗ ವಿಶ್ರಾಂತಿಯ ಅಗತ್ಯವೇನಿತ್ತು ಎಂದು ಅನೇಕರು ಪ್ರಶ್ನಿಸಿದ್ದಾರೆ.