* ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗಿಂದು ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ* ವೈಟ್‌ವಾಶ್ ಮುಖಭಂಗದಿಂದ ಪಾರಾಗಲು ಎದುರು ನೋಡುತ್ತಿದೆ ಕೆರಿಬಿಯನ್ ಪಡೆ* ಉಭಯ ತಂಡಗಳಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆ
ಅಹಮದಾಬಾದ್(ಫೆ.11): 2023ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ (Team India), ಹಲವು ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ವಿಂಡೀಸ್ ವಿರುದ್ಧ ಶುಕ್ರವಾರ ನಡೆಯುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವುದು ಒಂದು ಗುರಿಯಾದರೆ, ಅನುಭವಿ ಶಿಖರ್ ಧವನ್‌ರನ್ನು (Shikhar Dhawan) ಮತ್ತೆ ಆರಂಭಿಕನ ಸ್ಥಾನಕ್ಕೆ ತಂದು ಅವರನ್ನೇ ವಿಶ್ವಕಪ್‌ವರೆಗೂ ಉಳಿಸಿಕೊಳ್ಳಬಹುದಾ ಎಂದು ಪರೀಕ್ಷಿಸುವುದು ಮತ್ತೊಂದು ಸವಾಲು.
2017ರಲ್ಲಿ ಶ್ರೀಲಂಕಾ ವಿರುದ್ಧ 5-0ಯಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಆ ಬಳಿಕ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿಲ್ಲ. ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸುವ ಅವಕಾಶ ರೋಹಿತ್ ಶರ್ಮಾ(Rohit Sharma) ಪಡೆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭವಾದಾಗಿನಿಂದಲೂ ಭಾರತ ತಂಡ 2023ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಬಗ್ಗೆ ಮಾತನಾಡುತ್ತಿದೆ. ಕಳೆದ ಕೆಲ ವರ್ಷಗಳಿಂದ ತಂಡಕ್ಕೆ ಎದುರಾಗಿದ್ದ ದೊಡ್ಡ ಸಮಸ್ಯೆ ಎಂದರೆ ಪವರ್-ಪ್ಲೇ ಹಾಗೂ ಇನ್ನಿಂಗ್ಸ್ ಮಧ್ಯದಲ್ಲಿ ವಿಕೆಟ್ ಕಬಳಿಸುವ ಬೌಲರ್‌ನ ಕೊರತೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣಗೆ ಸ್ಥಾನ ನೀಡುವ ಮೂಲಕ ಭಾರತ ತನ್ನ ರಣತಂತ್ರ ಬದಲಿಸಿತು. ವಿಂಡೀಸ್ ಸರಣಿಯಲ್ಲೂ ಪ್ರಸಿದ್ಧ್ ಗೆ ಅವಕಾಶ ನೀಡಲಾಗುತ್ತಿದೆ.
ಈ ಪ್ರಯೋಗ ಫಲ ನೀಡುವಂತೆ ಕಾಣುತ್ತಿದೆ. ಮೊದಲ ಏಕದಿನದಲ್ಲಿ 29ಕ್ಕೆ 2 ವಿಕೆಟ್ ಕಿತ್ತಿದ್ದ ಪ್ರಸಿದ್ಧ್, 2ನೇ ಏಕದಿನದಲ್ಲಿ 9 ಓವರಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಬುಮ್ರಾ ಹಾಗೂ ಶಮಿ ವಾಪಸಾದ ಮೇಲೂ ಆಡುವ ಹನ್ನೊಂದರಲ್ಲಿ ಸ್ಥಾನ ಉಳಿಸಿಕೊಳ್ಳಲು ಪ್ರಸಿದ್ಧ್ ಪ್ರಯತ್ನಿಸುತ್ತಿದ್ದಾರೆ.
Ind vs WI: ಪ್ರಸಿದ್ಧ ಕೃಷ್ಣ ಸೂಪರ್ ಬೌಲಿಂಗ್, ಟೀಂ ಇಂಡಿಯಾಗೆ ಸರಣಿ ಗೆಲುವು!
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಮಧ್ಯಮ ಕ್ರಮಾಂಕಕ್ಕೆ ಕಾಯಂ ಆದಂತೆ ಕಾಣುತ್ತಿದೆ. ಈಗಾಗಲೇ ಸರಣಿ ಗೆದ್ದಿರುವ ಭಾರತ, 3ನೇ ಏಕದಿನದಲ್ಲಿ ಕೆಲ ಪ್ರಯೋಗಗಳಿಗೆ ಮುಂದಾಗಬಹುದು. ಶಿಖರ್ ಧವನ್ ವಾಪಸಾಗಲಿರುವ ಕಾರಣ, ದೀಪಕ್ ಹೂಡಾ ಹೊರಗುಳಿಯಬಹುದು. ಹೂಡಾ 6ನೇ ಬೌಲಿಂಗ್ ಆಯ್ಕೆ ಎನಿಸಿರುವುದರಿಂದ ಸೂರ್ಯಕುಮಾರ್‌ಗೇ ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ. ಕುಲ್ದೀಪ್ ಯಾದವ್ ಸಹ ಅವಕಾಶದ ನಿರೀಕ್ಷೆಯಲ್ಲಿದ್ದು ವಾಷಿಂಗ್ಟನ್ ಅಥವಾ ಚಹಲ್ ಬದಲು ಕಣಕ್ಕಿಳಿಯುವ ನಿರೀಕ್ಷೆ ಇದೆ.
ಇನ್ನು ವಿಂಡೀಸ್ ಕಳೆದ 17 ಪಂದ್ಯಗಳಲ್ಲಿ 11ರಲ್ಲಿ ಪೂರ್ತಿ 50 ಓವರ್ ಬ್ಯಾಟ್ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ 50 ಓವರ್ ಬ್ಯಾಟ್ ಮಾಡುವುದು ತಂಡದ ಮೊದಲ ಗುರಿ. 2ನೇ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಆಡಿದ್ದ ಒಡಿಯೇನ್ ಸ್ಮಿತ್ ತಮ್ಮ ಸ್ಫೋಟಕ ಆಟದ ಮೂಲಕ ಭರವಸೆ ಮೂಡಿಸಿದ್ದರು. ವಿಂಡೀಸ್ ಉತ್ತಮ ಆಟಗಾರರನ್ನು ಹೊಂದಿದ್ದರೂ, ಸಂಘಟಿತ ಪ್ರದರ್ಶನ ಮೂಡಿಬರದೆ ಇರುವುದೇ ಸೋಲಿಗೆ ಕಾರಣವಾಗುತ್ತಿದೆ. ಪೊಲ್ಲಾರ್ಡ್, ಹೋಪ್, ಪೂರನ್‌ರಂತಹ ಹಿರಿಯ ಆಟಗಾರರು ಜವಾಬ್ದಾರಿಯುತ ಆಟವಾಡಿದರೆ ವೈಟ್‌ವಾಶ್ ಮುಖಭಂಗ ತಪ್ಪಿಸಿಕೊಳ್ಳಬಹುದು.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಕುಲ್ದೀಪ್, ಪ್ರಸಿದ್ಧ್ ಕೃಷ್ಣ.
ವಿಂಡೀಸ್: ಶಾಯ್ ಹೋಪ್, ಬ್ರೆಂಡನ್ ಕಿಂಗ್, ಡ್ಯಾರನ್ ಬ್ರಾವೋ, ಸಮರ್ಥ್ ಬ್ರೂಕ್ಸ್, ನಿಕೋಲಸ್ ಪೂರನ್, ಕೀರನ್ ಪೊಲ್ಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಫ್ಯಾಬಿನ್ ಆ್ಯಲೆನ್, ಅಕೆಲ್ ಹೊಸೈನ್, ಅಲ್ಜೆರಿ ಜೋಸೆಫ್, ಕೀಮಾರ್ ಕೋಚ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
