Ind vs SL: ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ
* ಭಾರತ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬೌಲಿಂಗ್ ಆಯ್ಕೆ
* ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆಲ್ರೌಂಡರ್ ದೀಪಕ್ ಹೂಡಾ
* ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆ
ಲಖನೌ(ಫೆ.24): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಕಳೆದ ಪಂದ್ಯಕ್ಕೆ ಹೋಲಿಸಿದರೆ, ಈ ಪಂದ್ಯದಲ್ಲಿ ಭಾರತ ತಂಡದಲ್ಲಿ 6 ಬದಲಾವಣೆಗಳಾಗಿವೆ. ಈಗಾಗಲೇ ವೆಸ್ಟ್ ಇಂಡೀಸ್ ಎದುರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮತ್ತೊಮ್ಮೆ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ಅನನುಭವಿ ಆಟಗಾರರನ್ನೊಳಗೊಂಡ ಭಾರತದ ಮೇಲೆ ಸವಾರಿ ಮಾಡಲು ಲಂಕಾ ತಂಡ ಎದುರು ನೋಡುತ್ತಿದೆ.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಮೊದಲ ಟಿ20 ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಕೆಲವು ಬದಲಾವಣೆಗಳಾಗಿವೆ. ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಆಲ್ರೌಂಡರ್ ದೀಪಕ್ ಹೂಡಾ, ಇದೀಗ ಲಂಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಪಂದ್ಯಕ್ಕೆ ಹೋಲಿಸಿದರೆ, ಲಂಕಾ ಎದುರಿನ ಮೊದಲ ಟಿ20 ಪಂದ್ಯಕ್ಕೆ ಆರು ಬದಲಾವಣೆ ಮಾಡಲಾಗಿದ್ದು, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಯುಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದಾರೆ.
2 ತಿಂಗಳ ಬಳಿಕ ರವೀಂದ್ರ ಜಡೇಜಾ ತಂಡಕ್ಕೆ ವಾಪಸಾಗಲಿದ್ದು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಸಮತೋಲನ ಹೆಚ್ಚುವ ನಿರೀಕ್ಷೆ ಇದೆ. ಬುಮ್ರಾ ಬೌಲಿಂಗ್ ಪಡೆಗೆ ಬಲ ತುಂಬಲಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಭಾರತ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. 22 ಪಂದ್ಯಗಳ ಪೈಕಿ ಟೀಂ ಇಂಡಿಯಾ 14 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಶ್ರೀಲಂಕಾ ತಂಡವು 7 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ
ತಂಡಗಳು ಹೀಗಿವೆ ನೋಡಿ:
ಭಾರತ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್,ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ.
ಶ್ರೀಲಂಕಾ: ಕಮಿಲ್ ಮಿಶ್ರಾ, ಪತುಮಾ ನಿಸ್ಸಾಂಕ, ಮೆಂಡಿಸ್, ಚರಿತ್ ಅಸಲಂಕ, ದಿನೇಶ್ ಚಾಂಡಿಮಲ್(ವಿಕೆಟ್ ಕೀಪರ್), ಜನಿತ್ ಲಿಯಾಂಗೆ ದಶುನ್ ಶನಕ(ನಾಯಕ), ಜೆಫ್ರಿ ವೆಂಡರ್ಸೆ, ಚಮಿಕಾ ಕರುಣರತ್ನೆ, ದುಸ್ಮಂತ ಚಮೀರ, ಪ್ರವೀಣ್ ಜಯವಿಕ್ರಮ,ದುಸ್ಮಂತ ಚಮಿರಾ , ಲಹೀರು ಕುಮಾರ.
ಪಂದ್ಯ ಆರಂಭ: ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಟ್
ಏಕನಾ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿ ಎನಿಸಿದ್ದು, ಇಬ್ಬನಿ ಬೀಳುವ ನಿರೀಕ್ಷೆ ಇರುವ ಕಾರಣ ಮೊದಲು ಫೀಲ್ಡ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲವಾಗುವ ಸಾಧ್ಯತೆಯಿದೆ. ಇಲ್ಲಿ ಮೊದಲು ಬ್ಯಾಟ್ ಮಾಡುವ ತಂಡದ ಸರಾಸರಿ ಮೊತ್ತ 150-160 ರನ್‌ಗಳಿದೆ.