* ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 174 ರನ್‌ಗಳಿಗೆ ಆಲೌಟ್* ಬರೋಬ್ಬರಿ 400 ರನ್‌ಗಳ ಮುನ್ನಡೆ ಪಡೆದ ಟೀಂ ಇಂಡಿಯಾ* ಭಾರೀ ಹಿನ್ನೆಡೆ ಅನುಭವಿಸಿರುವ ಲಂಕಾ ಮೇಲೆ ಫಾಲೋ ಆನ್ ಹೇರಿದ ರೋಹಿತ್ ಶರ್ಮಾ ಪಡೆ
ಮೊಹಾಲಿ(ಮಾ.06): ಬ್ಯಾಟಿಂಗ್‌ನಲ್ಲಿ ಮನಮೋಹಕ ಶತಕ ಬಾರಿಸಿ ಮಿಂಚಿದ್ದ ಆಲ್ರೌಂಡರ್ ಜಡೇಜಾ, ಇದೀಗ ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ್ದಾರೆ. ಪರಿಣಾಮ ಮೊಹಾಲಿ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಕೇವಲ 174 ರನ್‌ಗಳಿಗೆ ಸರ್ವಪತನ ಕಂಡಿದೆ. ಬರೋಬ್ಬರಿ 400 ರನ್‌ಗಳ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇದೀಗ ಪ್ರವಾಸಿ ಲಂಕಾದ ಮೇಲೆ ಫಾಲೋ ಆನ್ ಹೇರಿದೆ. ರವೀಂದ್ರ ಜಡೇಜಾ ಏಕಾಂಗಿಯಾಗಿ ಬಾರಿಸಿದ(175*) ರನ್‌ಗಿಂತ ಒಂದು ರನ್ ಕಡಿಮೆ ಇಡೀ ಶ್ರೀಲಂಕಾ ತಂಡ ಬಾರಿಸಿದೆ.
ಹೌದು, ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಐ.ಎಸ್. ಬಿಂದ್ರಾ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡವು 574 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ್ದ ಶ್ರೀಲಂಕಾ ಕ್ರಿಕೆಟ್ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 108 ರನ್ ಬಾರಿಸಿತ್ತು. ಮೂರನೇ ದಿನದಾಟದ ಆರಂಭದಲ್ಲೇ ಭಾರತೀಯ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ಪ್ರವಾಸಿ ಲಂಕಾ ಬ್ಯಾಟರ್‌ಗಳನ್ನು ತಬ್ಬಿಬ್ಬಾಗುವಂತೆ ಮಾಡಿದರು.
5 ವಿಕೆಟ್ ಕಬಳಿಸಿ ಮಿಂಚಿದ ರವೀಂದ್ರ ಜಡೇಜಾ: ಬ್ಯಾಟಿಂಗ್‌ನಲ್ಲಿ ಅಜೇಯ 175 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ನೆರವಾಗಿದ್ದ ಜಡೇಜಾ, ಮೂರನೇ ದಿನದಾಟದ ಆರಂಭದಲ್ಲೇ ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸುವ ಮೂಲಕ ಲಂಕಾ ಬ್ಯಾಟರ್‌ಗಳನ್ನು ಕಾಡಿದರು. ಕೇವಲ 13 ಓವರ್ ಬೌಲಿಂಗ್ ಮಾಡಿದ ಜಡೇಜಾ 4 ಮೇಡನ್ ಸಹಿತ 41 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ರವೀಂದ್ರ ಜಡೇಜಾ 2017ರ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 5+ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೊದಲು ಜಡೇಜಾ 2017ರಲ್ಲಿ ಕೊಲಂಬೋದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 152 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಇನ್ನು ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನ ಪಂದ್ಯವೊಂದರಲ್ಲಿ 150+ ರನ್ ಹಾಗೂ 5+ ವಿಕೆಟ್ ಕಬಳಿಸಿದ ವಿಶ್ವದ ಆರನೇ ಕ್ರಿಕೆಟಿಗ ಎನ್ನುವ ಶ್ರೇಯವೂ ರವೀಂದ್ರ ಜಡೇಜಾ ಪಾಲಾಗಿದೆ. ರವೀಂದ್ರ ಜಡೇಜಾಗಿಂತ ಮೊದಲು ವಿನೂ ಮಂಕಡ್, ಡೇನಿಸ್ ಅಟ್ಕಿಶನ್, ಪಾಲಿ ಉಮ್ರಿಗಾರ್, ಗ್ಯಾರಿ ಸೋಬರ್ಸ್, ಮುಷ್ತಾಕ್ ಮೊಹಮ್ಮದ್ ಈ ಸಾಧನೆ ಮಾಡಿದ್ದರು.
Ind vs SL: ರವೀಂದ್ರ ಜಡೇಜಾ ಅಜೇಯ ಶತಕ, ಭಾರತದ ಹಿಡಿತದಲ್ಲಿ ಮೊಹಾಲಿ ಟೆಸ್ಟ್
ಪಥುಮ್ ನಿಸ್ಸಾಂಕ ಏಕಾಂಗಿ ಹೋರಾಟ: ಲಂಕಾ ಅಗ್ರಕ್ರಮಾಂಕದ ಬ್ಯಾಟರ್‌ಗಳು ಎರಂಕಿ ಮೊತ್ತ ದಾಖಲಿಸಿದರಾದರೂ ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಪಥುಮ್ ನಿಸ್ಸಾಂಕ ಏಕಾಂಗಿ ಹೋರಾಟ ನಡೆಸುವ ಮೂಲಕ ತಂಡ 150ರ ಗಡಿ ದಾಟಿಸುವಲ್ಲಿ ನೆರವಾದರು. 5ನೇ ವಿಕೆಟ್‌ಗೆ ನಿಸ್ಸಾಂಕ ಹಾಗೂ ಅಸಲಂಕಾ ಜೋಡಿ ಉಪಯುಕ್ತ 58 ರನ್‌ಗಳ ಜತೆಯಾಟ ನಿಭಾಯಿಸಿತು. ಇದು ಲಂಕಾ ಪರ ದಾಖಲಾದ ಗರಿಷ್ಠ ರನ್ ಜತೆಯಾಟವೆನಿಸಿತು. ದಿಟ್ಟ ಹೋರಾಟ ನಡೆಸಿದ ನಿಸ್ಸಾಂಕ 133 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ ಅಜೇಯ 61 ರನ್ ಬಾರಿಸಿದರು. ಚರಿತ್ ಅಸಲಂಕ 64 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 29 ರನ್ ಬಾರಿಸಿ ಜಸ್ಪ್ರೀತ್ ಬುಮ್ರಾ ಬಲೆಗೆ ಬಿದ್ದರು
ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಲಂಕಾ ಮತ್ತೆ ದಿಢೀರ್ ಕುಸಿತ ಕಂಡಿತು. ಕೇವಲ 15 ರನ್‌ಗಳ ಅಂತರದಲ್ಲಿ ಶ್ರೀಲಂಕಾ ತಂಡವು 5 ವಿಕೆಟ್ ಕಳೆದುಕೊಂಡಿತು. ಬಾಲಂಗೋಚಿಗಳಾದ ಸುರಂಗ ಲಕ್ಮಲ್, ಎಂಬಲ್ಡೇನಿಯಾ, ವಿಶ್ವ ಫರ್ನಾಂಡೋ ಹಾಗೂ ಲಹಿರು ಕುಮಾರ ಶೂನ್ಯ ಸುತ್ತಿ ಪೆವಿಲಿಯನ್ ಪೆರೇಡ್ ನಡೆಸಿದರು.
